ನವದೆಹಲಿ,ಜ 16(MSP): ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಮಾಡಿದ ಬಿಜೆಪಿ ಕಸರತ್ತುಗಳು ವಿಫಲವಾಗಿದ್ದು, ಕಾಂಗ್ರೆಸ್,ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಸುಭದ್ರವಾಗಿದೆ ಎಂದು ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮೈತ್ರಿ ಸರ್ಕಾರವನ್ನು ಅಭದ್ರಗೊಳಿಸಲು, ಬಿಜೆಪಿ ಸಾಕಷ್ಟು ಪ್ರಯತ್ನಪಟ್ಟಿದೆ ಇದೇ ಹಿನ್ನಲೆಯಲ್ಲಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಕುದುರೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಆದರೆ ಬಿಜೆಪಿಯವರ ಆಪರೇಷನ್ ಕಮಲ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ರಾಜಕಾರಣದ ಬೆಳವಣಿಗೆ ಕುರಿತು ಮಾತನಾಡಿರುವ ಪ್ರತಿಕ್ರಿಯಿಸಿರುವ ಅವರು, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಅಣತಿಯಂತೆ ಶಾಸಕರನ್ನು ಕೊಂಡುಕೊಳ್ಳುವ ಕೆಲಸ ನಡೆಯುತ್ತಿದೆ. ಬಿಜೆಪಿ ಮಾಡುತ್ತಿರುವ ಎಲ್ಲಾ ಕುದುರೆ ವ್ಯಾಪಾರದ ಕೆಲಸಗಳನ್ನು ದೇಶದ ಜನತೆ ನೋಡುತ್ತಿದ್ದಾರೆ. ಕ್ಷೇತ್ರದ ಜನತೆ ಆಯ್ಕೆ ಮಾಡಿದ ಶಾಸಕರನ್ನು ಬಿಜೆಪಿ ಹೈಜಾಕ್ ಮಾಡುತ್ತಿದೆ. ಬಿಜೆಪಿಯವರಿಗೆ ಅವರ ಶಾಸಕರ ಮೇಲೆಯೇ ನಂಬಿಕೆ ಇಲ್ಲ.ಇದಕ್ಕಾಗಿಯೇ ಅವರ ಶಾಸಕರನ್ನು ಹೋಟೆಲ್ ನಲ್ಲಿ ಬಂಧಿಸಿ ಇಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.