ಕುಂದಾಪುರ, ಜ 16(SM): ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಮಂಗಗಳು ಆಕಸ್ಮಿಕವಾಗಿ ಸಾವನ್ನಪ್ಪುತ್ತಿರುವುದು ಕೆ ಎಫ್ ಡಿ ವೈರಸ್ ನಿಂದ ಎಂದು ದೃಢಪಟ್ಟಿದೆ.
ಕುಂದಾಪುರ ತಾಲೂಕಿನ ಬೆಳ್ವಾಯಿ, ಸಿದ್ದಾಪುರ, ಬೈಂದೂರಿನ ಶಿರೂರು, ಕಾರ್ಕಳ, ಬ್ರಹ್ಮಾವರ ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮೃತಪಟ್ಟಿರುವ ಮಂಗಗಳು ಕೆ ಎಫ್ ಡಿ ವೈರಸ್ ನಿಂದ ಮೃತಪಟ್ಟಿರುವುದಾಗಿ ಪರೀಕ್ಷೆಯ ಬಳಿಕ ಸಾಬೀತಾಗಿದೆ.
ಮೃತಪಟ್ಟ ಮಂಗಗಳ ರಕ್ತದ ಮಾದರಿಯನ್ನು ಸ್ಥಳೀಯ ಆರೋಗ್ಯಾಧಿಕಾರಿಗಳು ಇಲಾಖೆಯ ಮೂಲಕ ಶಿವಮೊಗ್ಗ ವಿಡಿಎಲ್ ಸಂಸ್ಥೆಗೆ ಕಳುಹಿಸಲಾಗಿದ್ದು, ವಿಡಿಎಲ್ ಸಂಸ್ಥೆ ಇದೀಗ ತನಿಖಾ ವರದಿಯನ್ನು ಇಲಾಖೆಗೆ ರವಾನಿಸಿದೆ. ಅದರಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ಸಾಬೀತಾಗಿದೆ.
ಇನ್ನು ಈ ಬಗ್ಗೆ ದಾಯ್ಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಆರೋಗ್ಯಾಧಿಕಾರಿ ಪ್ರಶಾಂತ್, ಜಿಲ್ಲೆಯಲ್ಲಿ ಮೃತಪಟ್ಟಿರುವ ಮಂಗಗಳು ಕೆ ಎಫ್ ಡಿ ವೈರಸ್ ನಿಂದ ಮೃತಪಟ್ಟಿರುವುದು ನಿಜ. ಆದರೆ, ಈ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕರು ಸೂಕ್ತವಾದ ಮುಂಜಾಗೃತೆಯನ್ನು ವಹಿಸಿಕೊಳ್ಳಬೇಕು. ಜನ ಕಾಡಿನತ್ತ ತೆರಳಬಾರದು. ಒಂದೊಮ್ಮೆ ಕಾಡಿನತ್ತ ತೆರಳುವುದೇ ಆದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಆತಂಕದ ಅಗತ್ಯವಿಲ್ಲ:
ಇನ್ನು ಈ ವೈರಸ್ ಉಣ್ಣೆ(ಉಣುಗು)ಗಳಿಂದ ಹರಡುತ್ತದೆ. ವೈರಸ್ ನಿಂದಾಗಿ ಮೃತಪಟ್ಟಂತಹ ಮಂಗಗಳಲ್ಲಿದ್ದಂತಹ ಉಣುಗುಗಳು ತಗರೆಲೆಗಳಲ್ಲಿ ಸೇರಿಕೊಂದು ಆ ಪ್ರದೇಶಕ್ಕೆ ತೆರಳಿದಂತಹ ಪ್ರಾಣಿಗಳು ಅಥವಾ ಮನುಷ್ಯನ ಮೈ ಮೇಲೆ ಸೇರಿಕೊಳ್ಳುತ್ತವೆ. ಇದರಿಂದ ವೈರಸ್ ಹರಡುತ್ತದೆ. ಆದ್ದರಿಂದ ಕಾಡಿಗೆ ತೆರಳುವಂತಹ ಸಂದರ್ಭದಲ್ಲಿ ಮೈ ತುಂಬಾ ಬಟ್ಟೆಗಳನ್ನು ಧರಿಸಿಕೊಂಡು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಅವರು ಸೂಚನೆಯನ್ನು ನೀಡಿದ್ದಾರೆ.