ಉಳ್ಳಾಲ, ಜ 16(SM):ಯುವತಿಯೋರ್ವಳು ತಾಯಿಯೊಂದಿಗೆ ಮೊಬೈಲ್ ಸಂಭಾಷಣೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಸೇತುವೆಯಿಂದ ನೇತ್ರಾವತಿ ನದಿಗೆ ಬಿದ್ದಿದ್ದು, ಆಕೆಯನ್ನು ರಕ್ಷಣೆ ಮಾಡಿರುವ ಘಟನೆ ಬುಧವಾರ ತಡರಾತ್ರಿ ವೇಳೆ ಸಂಭವಿಸಿದೆ.
ಯುವತಿ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಳು. ಈ ವೇಳೆ ತಾಯಿಯೊಂದಿಗೆ ಸಂಭಾಷಣೆ ನಡೆಸುತ್ತಾ ತೆರಳುತ್ತಿದ್ದಳು. ನೇತ್ರಾವತಿ ನದಿ ಬಳಿಗೆ ತಲುಪಿದಾಗ ಏಕಾಏಕಿ ಕಾಲು ಜಾರಿ ಆಕೆ ನದಿಗೆ ಬಿದ್ದಿದ್ದಾಳೆ. ನದಿಗೆ ಬಿದ್ದ ಯುವತಿಗೆ ಸೇತುವೆಯ ಪಿಲ್ಲರ್ ನ ಒಂದು ಪಾರ್ಶ್ವದಲ್ಲಿ ಹಿಡಿತ ಸಿಕ್ಕಿದ ಪರಿಣಾಮ ಆಕೆ ಬಚಾವ್ ಆಗಿದ್ದಾಳೆ. ನದಿಯಲ್ಲಿ ಯುವತಿಯ ಕಿರುಚಾಟ ಕೇಳಿದ ಸ್ಥಳೀಯರು ಸ್ಥಳಾಕ್ಕೆ ದೌಡಾಯಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರೊಂದಿಗೆ ಕಾರ್ಯಚರಣೆ ನಡೆಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಆಕೆಯ ಪೋಷಕರು ಬಂದು ಆಕೆಯನ್ನು ಕರೆದೊಯ್ದಿದ್ದಾರೆ. ಈ ಬಗ್ಗೆ ಯಾವುದೇ ಕೇಸು ದಾಖಲಾಗಿಲ್ಲ.
ನದಿಗೆ ಹಾರಿದ್ದಳು ಎಂದು ವದಂತಿ:
ಇದಕ್ಕೂ ಮುನ್ನ ಯುವತಿಯೊಬ್ಬರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದಾಳೆ ಎಂದು ವಂದಂತಿಯಾಗಿತ್ತು. ಮೊಬೈಲ್ ನಲ್ಲಿ ಸಂಭಾಷಣೆ ನಡೆಸುತ್ತಿದ್ದ ಯುವತಿ ಏಕಾಏಕಿ ನದಿಗೆ ಹಾರಿದ್ದಾಳೆ ಎಂದು ಬೈಕ್ ಸವಾರರಿಬ್ಬರು ತಿಳಿಸಿದ್ದರು. ಆದರೆ, ಇದನ್ನು ಯುವತಿ ನಿರಾಕರಿಸಿದ್ದಾಳೆ.
ನಾನು ನದಿಗೆ ಹಾರಿಲ್ಲ. ತಾಯಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದೆ. ಈ ಸಂದರ್ಭ ನೇತ್ರಾವತಿ ಸೇತುವೆ ಬಳಿ ತಲುಪಿದ ಸಂದರ್ಭ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದೇನೆಯೇ, ಹೊರತು ನದಿಗೆ ಹಾರಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.