ಕುಂದಾಪುರ, ಜ 17(MSP): ಆರ್ಥಿಕವಾಗಿ ಸಮಸ್ಯೆಯಿಂದ ಬಳಲುತ್ತಿದ್ದ ಅಂಗಡಿ ಮಾಲೀಕನೊಬ್ಬ ಸೇತುವೆ ಮೇಲಿನಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೀತಿಯ ಘಟನೆ ಬುಧವಾರ ನಡೆದಿದೆ. ಸಂಗಂ ಸಮೀಪವಾಸಿ ಪ್ರವೀಣ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಸ್ಥಳದಲ್ಲಿ ಆತನ ಸ್ಕೂಟರ್ ಪತ್ತೆಆಗಿದೆ. ಆದರೆ ಪ್ರವೀಣ್ ದೇಹ ನಾಪತ್ತೆಯಾಗಿದೆ.
ಸಂಗಂ ಆನಗಳ್ಳಿ ರಸ್ತೆ ಬದಿಯಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದ ಪ್ರವೀಣ್ ಕೈತುಂಬಾ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಹಲವಾರು ಬಾರಿ ಬ್ಯಾಂಕಿನಿಂದ ನೋಟೀಸ್ ಬಂದಿತ್ತು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದ ಪ್ರವೀಣ್ ಬುಧವಾರ ಬೆಳಿಗ್ಗೆ ತನ್ನ ಸ್ನೇಹಿತನೊಬ್ಬನಿಗೆ ಫೋನ್ ಮಾಡಿ ತಾನು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ ಎನ್ನಲಾಗಿದೆ. ತಕ್ಷಣ ಪ್ರವೀಣನ ಸ್ನೇಹಿತಿ ಕುಂದಾಪುರ ಠಾಣೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಗ ಆತನನ್ನು ಠಾಣೆಗೆ ಕರೆತನ್ನಿ. ಬುದ್ದಿ ಹೇಳುತ್ತೇವೆ ಎಂದಿದ್ದರು ಎನ್ನಲಾಗಿದೆ. ಆದರೆ ಅದಾಗಲೇ ತನ್ನ ಸ್ಕೂಟರ್ನಲ್ಲಿ ಸಂಗಂ ಸೇತುವೆ ಬಳಿ ತೆರಳಿದ ಪ್ರವೀಣ್ ಸ್ಕೂಟರನ್ನು ಹೆದ್ದಾರಿ ಬದಿಯಲ್ಲಿಯೇ ಬಿಟ್ಟು ಹೊಳೆಗೆ ಹಾರಿದ್ದನೆನ್ನಲಾಗಿದೆ. ಈ ಘಟನೆಯನ್ನು ತಲ್ಲೂರಿನ ವ್ಯಕ್ತಿಯೊಬ್ಬರು ಗಮನಿಸಿದ್ದು ಸಮೀಪದ ಪೆಟ್ರೋಲ್ ಬಂಕಿಗೆ ತಿಳಿಸಿದ್ದಾರೆ. ಆದರೆ ಸ್ಥಳೀಯರು ಬಂದು ನೋಡುವಾಗ ಬೈಕ್ ಮಾತ್ರ ಸ್ಥಳದಲ್ಲಿದ್ದು ಪ್ರವೀಣ್ ಪತ್ತೆಯಾಗಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡಸಿದ್ದರೂ ಪ್ರವೀಣ್ ದೇಹ ಪತ್ತೆಯಾಗಿಲ್ಲ.
ಸ್ಥಳೀಯರು ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಲವಾಗಿ ನಂಬಿದ್ದಾರೆ. ಆದರೇ ತನಿಖಾ ಮೂಲಗಳು ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಬ್ಯಾಂಕಿನವರ ಸಾಲದ ಶೂಲದಿಂದ ತಪ್ಪಿಸಿಕೊಳ್ಳಲು ಬೈಕನ್ನು ಸ್ಥಳದಲ್ಲಿಯೇ ಬಿಟ್ಟು ನಾಪತ್ತೆಯಾಗಿದ್ದಾನೆಯೇ ಎನ್ನುವ ದಿಕ್ಕಿನಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ನಾಪತ್ತೆ ಪ್ರಕರಣ ದಾಖಲಾಗಿದೆ.