ಉಡುಪಿ, ಅ 24: ಟಿಪ್ಪು ಜಯಂತಿ ಆಚರಣೆಯ ವಿರುದ್ದ ರಾಜ್ಯದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದಂತೆ , ಉಡುಪಿಯ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕೂಡಾ ಈ ಬಗ್ಗೆ ಇಂದು ಬಾರೀ ಚರ್ಚೆ ನಡೆಯಿತು. ದೇಶಕ್ಕಾಗಿ ಹೋರಾಡಿದ ನಾಯಕರ ಜಯಂತಿ ಆಚರಣೆ ಮಾಡುವುದರಲ್ಲಿ ಅರ್ಥವಿದೆ. ಆದ್ರೆ ದೇಶಕ್ಕಾಗಿ ಎನೂ ಮಾಡದ ಟಿಪ್ಪುವಿನ ಜಯಂತಿ ಆಚರಣೆ ಮಾಡುವುದು ನಿಜಕ್ಕೂ ಮೂರ್ಖತನ ಎಂದು ಬಿಜೆಪಿ ಬೆಂಬಲಿತ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ರು. ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಧರ್ಮದ ಜನರು ಸೌಹರ್ದತೆಯಿಂದ ಬಾಳಿ ಬದುಕುತ್ತಿದ್ದಾರೆ. ಹೀಗಿರುವಾಗ ಕೇವಲ ಒಂದು ಧರ್ಮವನ್ನು ಒಲೈಸುವ ಸಲುವಾಗಿ ಬಾರೀ ವಿರೋದದ ನಡುವೆಯೂ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ. ಟಿಪ್ಪು ಜಯಂತಿ ಆಚರಣೆಯಿಂದ ಜಿಲ್ಲೆಯಲ್ಲಿ ಶಾಂತಿ ಸೌಹರ್ದತೆ ಕದಡುವ ಸಾದ್ಯತೆಯಿರುವ ಕಾರಣ ಟಿಪ್ಪು ಜಯಂತಿ ಆಚರಣೆಯನ್ನು ಕೈ ಬಿಡುವಂತೆ ಬೆಜೆಪಿ ಬೆಂಬಲಿತ ಸದಸ್ಯರು ಆಗ್ರಹ ಮಾಡಿದ್ರು. ಬಿಜೆಪಿ ಬೆಂಬಲಿತ ಸದಸ್ಯರ ಮಾತಿಗೆ ಕಾಂಗ್ರೆಸ್ ಬೆಂಬಲಿತ ಜರ್ನಾದನ ತೋನ್ಸೆ ಆಕ್ಷೇಪ ವ್ಯಕ್ತಪಡಿಸಿದ್ರು. ಇದು ಸರಕಾರದ ಕಾರ್ಯಕ್ರಮ ಈ ವಿಚಾರವಾಗಿ ಚರ್ಚಿಸುವ ಅಧಿಕಾರ ಜಿಲ್ಲಾ ಪಂಚಾಯತ್ಗೆ ಇಲ್ಲ ಎಂದ್ರು. ಈ ಸಂದರ್ಭ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ನಡುವೆ ವಾಕ್ ಸಮರ ನಡೆಯಿತು.
ವಿಧಾನ ಪರಿಷತ್ತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಮದ್ಯೆ ಮದ್ಯ ಪ್ರವೇಶಿಸಿ ಮಾತನಾಡಿದ್ರು, ಸರಕಾರ ಆಯೋಜಿಸಿರುವ ಕಾರ್ಯಕ್ರಮವನ್ನು ಕೈ ಬಿಡುವ ಹಕ್ಕು ಜಿಲ್ಲಾ ಪಂಚಾಯತ್ಗೆ ಇಲ್ಲ. ಆದ್ರೆ ಈ ಬಗ್ಗೆ ಸದಸ್ಯರ ವಿರೋಧ ಇದೆ ಎಂಬ ವಿಚಾರವನ್ನು ಸರಕಾರದ ಗಮನಕ್ಕೆ ತರುವ ಅವಕಾಶ ಜಿಲ್ಲಾ ಪಂಚಾಯತ್ಗೆ ಇದೆ. ಪತ್ರದ ಮೂಲಕ ಟಿಪ್ಪು ಜಯಂತಿ ಆಚರಣೆಯ ವಿಚಾರದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರ ಪರ ವಿರೋದದ ಬಗ್ಗೆ ಸರಕಾರದ ಗಮನ ಸೆಳೆಯಬಹುವುದು ಎಂದು ಸಲಹೆ ನೀಡಿದ್ರು. ಇನ್ನೂ ಕಾರ್ಕಳ ಪಡು ಬಿದ್ರಿ ರಾಜ್ಯ ಹೆದ್ದಾರಿಯ ಬೆಳ್ಮಣ್ಣು ಪರಿಸರದಲ್ಲಿ ಟೋಲ್ ಗೇಟ್ ತೆರೆಯುವ ವಿಚಾರದ ಕುರಿತು ಚರ್ಚೆ ಸೇರಿದಂತೆ ಜಿಲ್ಲೆಯಲ್ಲಿ ನಡೆದ ಕಾಮಗಾರಿಯ ಬಗ್ಗೆ ಚರ್ಚೆಗಳು ನಡೆಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ- ದಿನಕರ್ ಬಾಬು , ಉಪದ್ಯಾಕ್ಷೆ- ಕೆ ಶೀಲಾ ಶೆಟ್ಟಿ, ಜಿಲ್ಲಾ ಪಂಚಾಯತ್ ಸಿ ಓ ಶಿವಾನಂದ ಕಾಪಸಿ ಮೊದಲಾದವರು ಉಪಸ್ಥಿತರಿದ್ದರು.