ಬೆಳ್ಮಣ್,ಜ 17(MSP): ಸಂಕಲಕರಿಯ ಶಾಂಭವಿ ನದಿಯಲ್ಲಿ ಜ.12 ರಂದು ಬೊಲೇರೋ ಜೀಪ್ ಬಿದ್ದಾಗ ನೀರಿಗೆ ಧುಮುಕಿ ಜೀವದ ಹಂಗು ತೊರೆದು ಮೂವರನ್ನು ರಕ್ಷಿಸಿದ್ದ ಸಂಕಲಕರಿಯದ ಯುವಕರಾದ ಗುಣಪಾಲ ಹಾಗೂ ಅಶೋಕ್ರನ್ನು ಗುರುವಾರ ಬೋಳ ಚರ್ಚ್ನಲ್ಲಿ ಸನ್ಮಾನಿಸಲಾಯಿತು.
ನೀರಿಗೆ ಬಿದ್ದು ಸಾವನ್ನಪ್ಪಿದ್ದ ಸ್ಟಾನಿ ಅವರ ಪತ್ನಿ ಡಯಾನಾರ ವಾರದ ಪೂಜೆ ಬೋಳ ಸಂತ ಡಾನ್ ಬೋಸ್ಕೋ ಚರ್ಚ್ನಲ್ಲಿ ನಡೆದಾಗ ಚರ್ಚ್ನ ಧರ್ಮಗುರು ಆನಂದ್ ತಮ್ಮ ಪ್ರಾಣದ ಹಂಗು ತೊರೆದು ಮೂವರನ್ನು ರಕ್ಷಿಸಿದ ಜೀವ ರಕ್ಷಕರನ್ನು ಗೌರವಿಸಿದರು. ಈ ಸಂದರ್ಭ ದುರಂತದ ಸಂದರ್ಭ ಜೀಪ್ನಲ್ಲಿದ್ದ ಡಯಾನಾರ ಪತಿ ಸ್ಟೇನಿ ಮಸ್ಕರೇನಸ್, ಮಕ್ಕಳಾದ ಶರ್ಮನ್, ಶಲ್ಡನ್ ಹಾಗೂ ಸ್ಟೇನಿಯ ಕುಟುಂಬಸ್ಥರು ಹಾಜರಿದ್ದರು . ಸ್ಟೇನಿಯವರ ಸಹೋದರ ರೆ.ಫಾ. ಹೆನ್ರಿ ಮಸ್ಕರೇನಸ್ ಭಾವುಕರಾಗಿ ಅಭಿನಂದಿಸಿದರು. ದುರಂತದ ಸಂದರ್ಭ ಶ್ರಮಿಸಿದ್ದ ಮತ್ತಿತರರನ್ನೂ ಸ್ಟೇನಿಯವರ ಬಂಧುಗಳು ನೆನಪಿಸಿ ಕೃತಜ್ಞತೆ ಸಲ್ಲಿಸಿದರು.
ಘಟನೆ ನಡೆದಿದಿದ್ದು ಹೀಗೆ:
ಕಾರ್ಕಳ ತಾಲೂಕಿನ ಬೋಳ ಕೇಂದೊಟ್ಟು ಬರ್ಕೆಯ ಸ್ಟಾನಿ ಅವರು ಪತ್ನಿ, ಮಕ್ಕಳೊಂದಿಗೆ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಹಾಲ್ನಲ್ಲಿ ನಡೆಯಲಿದ್ದ ತನ್ನ ಸೊಸೆಯ ಮದುವೆಗೆ ಹೊರಟಿದ್ದರು.ಆದರೆ ದುರಾದೃಷ್ಟವಶಾತ್ ಬೆಳಗ್ಗೆ 8.50ರ ಹೊತ್ತಿಗೆ ಅವರು ಚಲಾಯಿಸುತ್ತಿದ್ದ ಜೀಪ್ ಸಂಕಲಕರಿಯ ಶಾಂಭವಿ ನದಿ ಸೇತುವೆಯ ಪಶ್ಚಿಮ ಭಾಗದ ತಡೆಗೋಡೆಗೆ ಢಿಕ್ಕಿ ಹೊಡೆದು ನದಿಗೆ ಮಗುಚಿ ಬಿದ್ದಿತ್ತು. ನದಿಗೆ ಅಡ್ಡಲಾಗಿ ಅಣೆಕಟ್ಟು ಹಾಕಿದ್ದರಿಂದ ನದಿಯ ತುಂಬಿ ತುಳುಕುತ್ತಿತ್ತು. ಘಟನೆ ನಡೆದ ತಕ್ಷಣ ಪಟ್ಟೆ ಕ್ರಾಸ್ನ ಗುಣಪಾಲ, ಉಳೆಪಾಡಿಯ ಆಶೋಕ ಅವರು ಮೂವರನ್ನು ರಕ್ಷಿಸಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರಲ್ಲದೇ ಪಟ್ಟೆ, ಉಳೆಪಾಡಿ ಹಾಗೂ ಏಳಿಂಜೆ ಪರಿಸರದ 50ಕ್ಕೂ ಮಿಕ್ಕಿ ಯುವಕರು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.