ಮಂಗಳೂರು ಅ 24: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ರೌಡಿ ನಿಗ್ರಹದ ದಳದ ಪೊಲೀಸರು ಬಂಧಿಸಿದ್ದಾರೆ. ಬಲ್ಮಠದ ಆರ್ಯ ಸಮಾಜದ ರಸ್ತೆಯಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಈ ವಿದ್ಯಾರ್ಥಿಗಳು, ತಮ್ಮದೇ ಕಾಲೇಜಿನ ಇತರ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಅ. 23 ರ ಸೋಮವಾರ ಸಂಜೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಂಡೇಶ್ವರದ ಖಾಸಗಿ ಕಾಲೇಜಿನಲ್ಲ್ಲಿಅಂತಿಮ ವರ್ಷದ ಇಂಟೀರಿಯರ್ ಡಿಸೈನಿಂಗ್ ಅಭ್ಯಾಸಿಸುತ್ತಿರುವ ವಿದ್ಯಾರ್ಥಿಗಳಾದ ಶಹೀನ್ ಕೆ. ಆಯೂಬ್ (21), ಶೆಹನ್ ಬಶೀರ್ (20), ಸಚಿನ್ ಪ್ರದೀಪನ್ (20) ಬಂಧಿತ ಆರೋಪಿಗಳು.
ಇವರಿಂದ ಸುಮಾರು 32,300 ರೂಪಾಯಿ ಮೌಲ್ಯದ ೧೨ ಗಾಂಜಾ ಪ್ಯಾಕೇಟ್ ಮತ್ತು ೪೦೦ ಗ್ರಾ ತೂಕದ ಲೂಸ್ ಗಾಂಜಾ ಹಾಗೂ ನಾಲ್ಕು ಮೊಬೈಲ್ ಪೋನ್ ವಶಪಡಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳೆಲ್ಲರೂ ಕೇರಳ ಮೂಲದವರಾಗಿದ್ದು, ದಾಳಿ ವೇಳೆ ಗಾಂಜಾವನ್ನು ಶಾಲಾ ಬ್ಯಾಗ್ ಹಾಗೂ ಮನೆಯಲ್ಲಿ ಕಾಪಾಟಿನಲ್ಲಿ ಬಚ್ಚಿಟ್ಟಿಲಾಗಿದ್ದರು . ಆರೋಪಿಗಳು ಸುಮಾರು 1 ವರ್ಷದಿಂದ ಕೇರಳದಿಂದ ಗಾಂಜಾವನ್ನು ನಗರಕ್ಕೆ ತಂದು, ಪ್ಯಾಕೇಟ್ ಮಾಡಿ ಮಾರಾಟದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಇವರು ತಮ್ಮದೇ ನಂಬಿಕಸ್ಥ ಗ್ರಾಹಕರಿಗೆ ಹಾಗೂ ಮತ್ತು ತಾವು ಓದುತ್ತಿರುವ ಖಾಸಗಿ ಕಾಲೇಜಿನ ಸಮೀಪ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ತನಿಖೆ ವೇಳೆ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಇವರಿಗೆ ಈಶ್ವರನ್ ಎಂಬಾತ ಗಾಂಜಾ ಸರಬರಾಜು ಮಾಡುತ್ತಿದ್ದ.
ಸೇಲ್ ಆಫರ್ ವ್ಯವಸ್ಥೆ:
ಗಾಂಜಾ ವನ್ನು ಪೊರೈಕೆ ಮಾಡುತ್ತಿದ್ದ ಈಶ್ವರನ್ ಈ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಆಫರ್ ವ್ಯವಸ್ಥೆಯನ್ನು ನೀಡಿರುತ್ತಾನೆ.ತಲಾ 50 ಗ್ರಾಂ ತೂಕದ ಗಾಂಜಾ 5 ಪಾಕೆಟ್ ಖರೀದಿಸಿದರೆ ಒಂದು ಪಾಕೆಟನ್ನು ಉಚಿತವಾಗಿ ನೀಡುವಂತಹ ವ್ಯವಸ್ಥೆಯನ್ನು ಮಾಡಿ ಮಾರಾಟ ಮಾಡಲು ಉತ್ತೇಜನ ನೀಡುತ್ತಿದ್ದನು ಎನ್ನಲಾಗಿದೆ.
ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಪೊಲೀಸ್ ಆಯುಕ್ತರಾದ ಶ್ರೀ ಟಿ.ಆರ್.ಸುರೇಶ್ ರವರ ನಿರ್ದೇಶನದಂತೆ, ಹನುಮಂತರಾಯ (ಐಪಿಎಸ್) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಶ್ರೀಮತಿ ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎ.ಸಿ.ಪಿ. ಶ್ರೀ ಕೆ.ರಾಮರಾವ್ ಮತ್ತು ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದರು.