ಉಳ್ಳಾಲ,ಜ 18 (MSP): ಪ್ರಾರ್ಥನೆಯ ಸಭಾಂಗಣದಲ್ಲಿ ವೃದ್ಧರೊಬ್ಬರಿಗೆ ಹಲ್ಲೆ ನಡೆಸಿ ಚಿನ್ನ ದರೋಡೆ ಮಾಡಿರುವ ಘಟನೆ ತೊಕ್ಕೊಟ್ಟಿನಲ್ಲಿರುವ ಸ್ಮಾರ್ಟ್ ಸಿಟಿ ವಾಣಿಜ್ಯ ಮತ್ತು ವಸತಿ ಸಂಕೀರ್ಣದಲ್ಲಿರುವ ಪ್ರಾರ್ಥನಾ ಸಭಾಂಗಣದಲ್ಲಿ ನಡೆದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟು ಜಂಕ್ಷನ್ ನಿವಾಸಿ ಗಂಗಾಧರ್ (66) ಹಲ್ಲೆಗೊಳಗಾದವರು. ಇವರ ಬಳಿಯಿದ್ದ 3 ಪವನ್ ತೂಕದ ಚಿನ್ನದ ಸರ ದರೋಡೆ ನಡೆಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಾರ್ಥನಾ ಸಭಾಂಗಣ ಕಟ್ಟಡವಿರುವ ಸನಿಹವೇ ಗಂಗಾಧರ್ ಅವರ ಮನೆ ಇದ್ದು, ಇವರ ಮನೆಯ ಗೇಟಿನ ಎದುರುಗಡೆ ಬುಧವಾರ ಸಂಜೆ ವೇಳೆ ಪ್ರಾರ್ಥನಾ ಸಭಾಂಗಣದಿಂದ ಟ್ಯೂಬ್ ಲೈಟ್ ಅನ್ನು ಎಸೆಯಲಾಗಿತ್ತು. ಇದನ್ನು ಪ್ರಶ್ನಿಸಲು ಗಂಗಾಧರ್ ಅವರು ಪ್ರಾರ್ಥನಾ ಸಭಾಂಗಣದ ಒಳಗಡೆ ತೆರಳಿದ್ದರು. ಈ ವೇಳೆ ಶೇಖ್ ಬಶೀರ್, ನಾಸಿರ್, ಇಸ್ಮಾಯಿಲ್ ಸಹಿತ 10 ಮಂದಿಯ ತಂಡ, ಗಂಗಾಧರ್ ಅವರ ಮೇಲೆ ಏಕಾಏಕಿ ರಾಡು, ಕೈಗಳಿಂದ ಎದೆ, ಸೊಂಟ ಹಾಗೂ ಕಣ್ಣಿನ ಭಾಗಕ್ಕೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಬೆದರಿಕೆಯನ್ನು ಒಡ್ಡಿದ್ದಾರೆ. ಗಾಯಗೊಂಡಿರುವ ಗಂಗಾಧರ್ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಮೂರು ಸ್ಟಿಚ್ ಹಾಕಲಾಗಿದೆ ಎಂದು ಅವರ ಪುತ್ರ ತಿಳಿಸಿದ್ದಾರೆ.
ಬಾಂಗ್ ವಿರುದ್ಧ ದೂರು: ಇದು ಕೇವಲ ಕಟ್ಟಡಕ್ಕೆ ಸಂಬಂಧಿಸಿದ ಪ್ರಾರ್ಥನಾ ಸಭಾಂಗಣ ವಾಗಿದ್ದರೂ, ಅಲ್ಲಿ ಬೆಳಗ್ಗೆ ಆಝಾನ್ (ಬಾಂಗ್) ಅನ್ನು ಧ್ವನಿವರ್ಧಕದ ಮೂಲಕ ನೀಡುತ್ತಿದ್ದಾರೆ. ಮಸೀದಿಗಳಲ್ಲಿ ನಡೆಸುವ ವಿಧಾನವನ್ನು ಪ್ರಾರ್ಥನಾ ಸಭಾಂಗಣದಲ್ಲಿ ನಡೆಸುವುದು ಸರಿಯಲ್ಲ. ಅದು ಕಾನೂನು ವಿರೋಧವಾಗಿದೆ. ಈ ಕುರಿತು ಗಂಗಾಧರ್ ಅವರು ಪ್ರಾರ್ಥನಾ ಸಭಾಂಗಣದ ಸಮಿತಿಯ ಗಮನಕ್ಕೆ ತಂದಿದ್ದರು. ಆದರೂ ಧ್ವನಿವರ್ಧಕ ಬಳಕೆ ಮುಂದುವರಿಸಿದಾಗ ಗಂಗಧಾರ್ ಮತ್ತು ಸ್ಥಳೀಯ ನಿವಾಸಿ ಥೆರೆಸಾ ಡಿ’ಸೋಜಾ ಜಿಲ್ಲಾಧಿಕಾರಿಗಳಿಗೆ ಮತ್ತು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು ಎಂದು ಗಂಗಾಧರ್ ಕುಟುಂಬ ಮೂಲಗಳು ತಿಳಿಸಿದೆ.
ಗಂಗಾಧರ್ ವಿರುದ್ಧ ಪ್ರತಿದೂರು: ಗಂಗಾಧರ್ ಪ್ರಾರ್ಥನಾ ಸಭಾಂಗಣಕ್ಕೆ ಏಕಾಏಕಿ ಅಕ್ರಮವಾಗಿ ನುಗ್ಗಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಮಾರ್ಟ್ ಸಿಟಿಯ ಪ್ರಾರ್ಥನಾ ಮಂದಿರ ಸಂಬಂಧಪಟ್ಟವರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ 295 ಎ ಧಾರ್ಮಿಕ ಭಾವನೆಗೆ ಧಕ್ಕೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಾಣಿಜ್ಯ ಕಟ್ಟಡದವರಿಂದ ತಪ್ಪಾಗಿದ್ದರೂ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿತ್ತು. ಆದರೆ ಏಕಾಏಕಿ ಅವರೇ ಹೋಗಿ ವಿಚಾರಿಸಲು ಮುಂದಾಗಿದ್ದಾರೆ. ನಾವು ಸೂಕ್ತ ಸಮಯಕ್ಕೆ ಅಲ್ಲಿಗೆ ತೆರಳಿ ಗಂಗಾಧರ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಎರಡೂ ಕಡೆಯ ದೂರುಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.