ಬದಿಯಡ್ಕ,ಜ 18 (MSP): ಪಳ್ಳತ್ತಡ್ಕ ಬಳಿಯ ವಳಕುಂಜದಲ್ಲಿ ಆರು ಜನ ಶಸ್ತ್ರಸಜ್ಜಿತ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ ಎಂಬುವುದು ಕೇವಲ ಕಟ್ಟುಕಥೆಯಾಗಿದೆ. ಮಾವೋವಾದಿಗಳನ್ನು ಕಂಡಿರುವುದಾಗಿ ಹೇಳಿರುವ ಜೈಸನ್ ಜೋಸೇಫ್ ನನ್ನು ತೀವ್ರ ತನಿಖೆಗೊಳಪಡಿಸಿದಾಗ ಆತ ಹೇಳಿದ್ದು ಸುಳ್ಳು ಎಂಬುವುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಸನ್ ಜೋಸೇಫ್ ಒಬ್ಬ ರಬ್ಬರ್ ಟ್ಯಾಪಿಂಗ್ ಕಾರ್ಮಿಕನಾಗಿದ್ದು, ಪಳ್ಳತಡ್ಕ ಭಾಗದಲ್ಲಿ ಇದುವರೆಗೆ ಈತನೇ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದ.
ಆದರೆ ಇತ್ತೀಚೆಗೆ ತಿರುವನಂತಪುರ, ಕೊಲ್ಲಂ ಕಲ್ಲಿಕೋಟೆಯಿಂದ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಪಳ್ಳತಡ್ಕಕ್ಕೆ ಬಂದಿದ್ದರು. ಇದರಿಂದ ತನಗೆ ಕೆಲಸ ಕಡಿಮೆಯಾಗಬಹುದು ಎಂಬ ಆತಂಕ ಜೈಸನ್ ನನ್ನು ಕಾಡತೊಡಗಿತ್ತು. ಇದೇ ಆತಂಕದಲ್ಲಿ ಅವರನ್ನು ಅಲ್ಲಿಂದ ಬೆದರಿಸಿ ಓಡಿಸಲು ಶಸ್ತ್ರಸಜ್ಜಿತ ನಕ್ಸಲರನ್ನು ಕಂಡಿದ್ದಾಗಿ ಸುಳ್ಳುಕಥೆ ಹೆಣೆದು ತಂತ್ರ ಹೂಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ದೂರಿನ ಬಗ್ಗೆ ಹೆಚ್ಚಿನ ತನಿಖೆಗಾಗಿ ಇಂಟಲಿಜೆನ್ಸ್ ತಂಡ ಜೈಸನ್ ಜೋಸೇಫ್ ಮನೆಗೆ ತೆರಳಿ ಆತನಿಂದ ಹೇಳಿಕೆ ದಾಖಲಿಸಿಕೊಂಡಿದೆ.ಆತನ ಮನೆಬಳಿಯಲ್ಲೇ ಹದಿನೈದಕ್ಕೂ ಹೆಚ್ಚು ಮನೆಗಳಿವೆ. ಈ ಮನೆಯ ಯಾವುದೇ ಸದಸ್ಯರು ನಕ್ಸಲರು ಬಂದಿರುವುದನ್ನು ಕಂಡಿಲ್ಲ. ಈ ಹಿನ್ನಲೆಯಲ್ಲಿ ಆತನನ್ನು ಇನ್ನಷ್ಟು ತನಿಖೆಗೆ ಒಳಪಡಿಸಿದಾಗ ಕಟ್ಟುಕಥೆ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.