ತುಮಕೂರು,ಜ 18 (MSP): ಸಿದ್ದಗಂಗಾ ಮಠಾಧೀಶ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದರೂ, ಅವರ ಆರೋಗ್ಯದಲ್ಲಿ ಕ್ಷಣ ಕ್ಶಣಕ್ಕೂ ಬದಲಾವಣೆಯಾಗುತ್ತಿರುವುದರಿಂದ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ಇಂದು ಮುಂಜಾನೆ ಬೆಳಗ್ಗೆ 5 ಗಂಟೆ ಸಮಯದಲ್ಲಿ ಸ್ವಾಮೀಜಿಗಳ ರಕ್ತ, ರಕ್ತದೊತ್ತಡ ಮತ್ತಿತರ ಪರೀಕ್ಷೆ ನಡೆಸಲಾಗಿದ್ದು, ವೆಂಟಿಲೇಷನ್ ಮೂಲಕ ಶ್ರೀಗಳಿಗೆ ಉಸಿರಾಟ ವ್ಯವಸ್ಥೆ ಮಾಡಲಾಗಿದೆ.
ನಮ್ಮ ಊಹೆಗೂ ನಿಲುಕದ ರೀತಿಯಲ್ಲಿ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶ್ರೀಗಳು ಒಂದು ಬಾರಿ ತೀರಾ ಅನಾರೋಗ್ಯಕ್ಕೆ ಒಳಗಾದವರಂತೆ ಕಾಣುತ್ತಾರೆ, ಅನಂತರ ಚೇತರಿಸಿಕೊಳ್ಳುತ್ತಿದ್ದರೆ. ವೆಂಟಿಲೇಟರ್ ಮೂಲಕ ಕೆಲವು ಗಂಟೆಗಳ ಕಾಲ ಉಸಿರಾಡಿದರೆ ಮತ್ತೆ ಕೆಲವು ಗಂಟೆ ಸ್ವಯಂ ಉಸಿರಾಟ ಮಾಡುತ್ತಿದ್ದಾರೆ. ಎಂದು ವೈದ್ಯರು ತಿಳಿಸಿದ್ದಾರೆ.
ಇದೆಲ್ಲದರ ಮದ್ಯೆ ನಡೆದಾಡುವ ದೇವರು ಬೇಗ ಚೇತರಿಸಿಕೊಳ್ಳಲಿ ಎಂದು ವಿವಿಧೆಡೆ ವಿಶೇಷ ಪ್ರಾರ್ಥನೆಗಳು ನಡೆಯುತ್ತಿವೆ. ಇನ್ನು ಶ್ರೀಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದು, ಶ್ರೀಗಳು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
"ಪರಮಪೂಜ್ಯ ಡಾಕ್ಟರ್ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರದು ಅಮೋಘ ವ್ಯಕ್ತಿತ್ವ . ಅವರ ಮಹೋನ್ನತ ಸೇವೆ ಕೋಟ್ಯಾಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಶ್ರೀಗಳು ಬೇಗ ಗುಣ ಮುಖರಾಗಲಿ ಎಂದು ಹಾಗೂ ದೇವರು ಅವರಿಗೆ ಉತ್ತಮ ಆರೋಗ್ಯ ಕರುಣಿಸಲೆಂದು ಇಡೀ ರಾಷ್ಟ್ರ ಪ್ರಾರ್ಥಿಸುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.