ಕುಂದಾಪುರ,ಜ 18 (MSP): ಬೈಂದೂರು ವಿಧಾನಸಭಾ ಕ್ಷೇತ್ರ ಸಹಿತ ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಈಗಾಗಲೇ 42 ಸಾವಿರ ಮಂದಿಗೆ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್ಗಳನ್ನು ವಿತರಿಸಲಾಗಿದ್ದು, ಬಾಕಿ ಇರುವ ಅರ್ಹ 12.5 ಸಾವಿರ ಮಂದಿ ಬಿಪಿಎಲ್ ಫಲಾನುಭವಿಗಳಿಗೆ ಮಾರ್ಚ್ 15 ರೊಳಗೆ ಉಜ್ವಲ ಅನಿಲ ಸಂಪರ್ಕ ಕಲ್ಪಿಸಲಾಗುವುದು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಶುಕ್ರವಾರ ಹೆಮ್ಮಾಡಿಯ ಆದರ್ಶ ಯುವಕ ಮಂಡಲದ ಹೆರಿ ರೆಬೆಲ್ಲೊ ಸಭಾಭವನದಲ್ಲಿ ಉಜ್ವಲ ಯೋಜನೆಯ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಒಲೆ ವಿತರಿಸಿ ಮಾತನಾಡಿದರು.
ಹೊಗೆ ರಹಿತ ದೇಶ ನಿರ್ಮಾಣ ಹಾಗೂ ಕಾಡು ರಕ್ಷಣೆಯ ಚಿಂತನೆಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಆರೋಗ್ಯ ಕಾಳಜಿ ಉದ್ದೇಶವಿಟ್ಟುಕೊಂಡು ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆರಂಭಿಸಿದ್ದಾರೆ. ಬಿಪಿಎಲ್ ಕಾರ್ಡ್ದಾರರ ಹೆಸರಿನಲ್ಲಿ ಈ ಮೊದಲೇ ಗ್ಯಾಸ್ ನೋಂದಣಿಯಾಗಿದ್ದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಭೇಟಿ ನೀಡಿ ಪರಿಹರಿಸಿಕೊಳ್ಳಿ ಎಂದು ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ವಾರಾಹಿ ಏತ ನಿರಾವರಿ ಯೋಜನೆಗೆ ಬಜೆಟ್ನಲ್ಲಿ ಅನುದಾನ ಕಾದಿರಿಸಲು ಯೋಜನೆ ರೂಪಿಸಲಾಗಿದೆ. ಬೈಂದೂರಿನಲ್ಲಿ ವಿಮಾನ ನಿಲ್ದಾಣಕ್ಕೆ ಸ್ಥಳ ಕಾದಿರಿಸಿ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಲಲಾಗಿದೆ ಎಮದ ಅವರು, ಕೆಂದ್ರ ಹಾಗು ರಾಜ್ಯ ಸರ್ಕಾರದ ತಲಾ 60-40 ಶೇಕಡಾ ಅನುದಾನದಲ್ಲಿ ಕಡಲ ತೀರವನ್ನು ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವಲ್ಲಿ ಚಿಂತನೆ ನಡೆಸಲಾಗಿದೆ. 200 ಕೋಟಿ ರೂಪಾಯಿ ಅನುದಾನದಲ್ಲಿ ಮರವಂತೆ, ಉಪ್ಪುಂದ, ಶಿರೂರು ಅಳ್ವೆಗದ್ದೆ ಬಂದರು ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದ ಅವರು, ಆಯುಷ್ಮಾನ್ ಭಾರತದ ಯೋಜನೆಯನ್ನು ಬಿಪಿಎಲ್ ಕಾರ್ಡುದಾರರಿಗೆ 2ರಿಂದ 5 ಲಕ್ಷಕ್ಕೆ ಏರಿಸಲಾಗಿದ್ದು, ಎಪಿಎಲ್ ಕಾಡುದಾರರಿಗೆ ಒಂದೂವರೆ ಲಕ್ಷ ನಿಗಧಿ ಮಾಡಲಾಗಿದೆ ಎಂದರು. ಈ ಯೋಜನೆಯಡಿ ಬಂದೂರಲ್ಲಿ 11,500 ಮಂದಿಗೆ ಅರ್ಹತಾ ಪತ್ರ ನೀಡಲಾಗುವುದು. ಇದು ಸುಮಾರು ೧,೬೫೦ ರೋಗಗಳ ಚಿಕಿತ್ಸೆಗೆ ನೆರವಾಗಲಿದೆ ಎಂದರು.