ಬೈಂದೂರು, ಜ 18 (MSP): ಕಳೆದ ಮೂರು ದಿನಗಳಿಂದ ಬೈಂದೂರು ಶಾಸಕರು ಕ್ಷೇತ್ರದ ಪ್ರವಾಸೋದ್ಯಮಕ್ಕಾಗಿ ಏನೆಲ್ಲಾ ಯೋಜನೆಗಳು ತರಬಹುದು ಎಂಬ ದಿಕ್ಕಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಯವರು ಡೆಲ್ಲಿಗೆ ಮೋಜು, ಮಸ್ತಿ ಮಾಡಲು ತೆರಳಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಅವರು ಜ 18 ರ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ಬೈಂದೂರು ಕ್ಷೇತ್ರದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಹಾಗೂ ಈ ಭಾಗದ ಮೀನುಗಾರರ ಹಿತದೃಷ್ಠಿಯಿಂದ ಬಂದರುಗಳ ಅಭಿವೃದ್ದಿ ಮಾಡಲು ಕೇಂದ್ರದಿಂದ ಏನೆಲ್ಲಾ ಅನುದಾನಗಳನ್ನು ತರಬಹುದು ಎಂಬ ಚಿಂತನೆ ನಡೆಸಿ ನನ್ನ ಜೊತೆಗೂಡಿ ಶಾಸಕ ಸುಕುಮಾರ ಶೆಟ್ಟಿಯವರು ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆಯೇ ಹೊರತು ರೆಸಾರ್ಟ್ನಲ್ಲಿ ಕೂತು ಮೋಜು ಮಾಡಿಲ್ಲ. ಕ್ಷೇತ್ರದಲ್ಲಿದ್ದಾಗಲೂ ಅವರು ಹಗಲು ರಾತ್ರಿ ಅಭಿವೃದ್ದಿ ಕೆಲಸಗಳ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಅಲ್ಲಿಯೂ ಅವರು ಅದೇ ಕೆಲಸವನ್ನು ಮಾಡುತ್ತಿದ್ದಾರೆ. ಬೈಂದೂರು ಶಾಸಕರ ವಿರೋಧಿಗಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಶಾಸಕರನ್ನು ಸಮರ್ಥಿಸಿಕೊಂಡರು.
ಬಿಜೆಪಿ ಆಪರೇಶನ್ ಕಮಲದ ಕುರಿತು ಪ್ರತಿಕ್ರಿಯಿಸಿದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶಾಸಕರೆಲ್ಲರೂ ದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಶುಕ್ರವಾರ ಸಂಜೆ ಅಥವಾ ಶನಿವಾರ ಬಿಜೆಪಿ ಶಾಸಕರೆಲ್ಲರೂ ತಮ್ಮ ತಮ್ಮ ಕ್ಷೇತ್ರಗಳಿಗೆ ವಾಪಾಸಾಗುತ್ತಾರೆ. ನಾವೇನು ಆಪರೇಶನ್ ಕಮಲ ಮಾಡುತ್ತಿಲ್ಲ. ಈ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಮ್ಮ ಶಾಸಕರಿಗೆ ಫೋನ್ ಮಾಡುವ ಕೆಲಸಗಳನ್ನು ಮಾಡುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್ ವೈಫಲ್ಯಗಳನ್ನು ಮುಚ್ಚಿ ಹಾಕಲು ಬಿಜೆಪಿ ವಿರುದ್ದ ಆರೋಪಗಳನ್ನು ಹೊರಿಸಲಾಗುತ್ತಿದೆ. ಇದನ್ನು ಈ ನಾಡಿನ ಜನತೆ ಕ್ಷಮಿಸಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತದೆ: ಹಿಂದೆ ಆಡಳಿತ ನಡೆಸಿದ್ದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ ಎಂದು ರಾಜ್ಯದ ಜನರು ವಿರೋಧ ಪಕ್ಷದಲ್ಲಿ ಕೂರಿಸಿದರೆ ಅವರು ಜೆಡಿಎಸ್ನೊಂದಿಗೆ ಜೊತೆಗೂಡಿ ಮೈತ್ರಿ ಸರ್ಕಾರವನ್ನು ರಚಿಸಿ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ. ಬಿಜೆಪಿಯನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಇಲ್ಲ. ಕಳೆದ ಆರು ತಿಂಗಳುಗಳಿಂದ ಸರ್ಕಾರ ಇದೆಯೋ ಸತ್ತಿದೆಯೋ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸಾ ಮನ್ನಾ ಮಾಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆಯೇ ಹೊರತು ಇದುವರೆಗೂ ಸಾಲ ಮನ್ನಾ ಯೋಜನೆ ರೈತರಿಗೆ ಅನುಕೂಲ ಆಗಿಲ್ಲ. ನಿರಂತರವಾಗಿ ಸುಳ್ಳು ಹೇಳಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.