ಕಾಸರಗೋಡು ಜ 18(SM): ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿ ಸ್ಥಳಕ್ಕೆ ತೆರಳಿದ ಎಎಸ್ ಐ ರವರ ಮೇಲೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಾಂಗಾಡ್ ನ ಶಬಿರಾಲಿ(24), ಅಬ್ದುಲ್ ರಹಮಾನ್(25) ಮತ್ತು ಆಶೀದ್(25) ಎಂದು ಗುರುತಿಸಲಾಗಿದೆ.
ಜನವರಿ ಒಂದರಂದು ಬೇಕಲ ಕಳ್ನಾಡ್ ನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಗುಂಪೊಂದು ಸಂಚಾರಕ್ಕೆ ಅಡ್ಡಿಪಡಿಸಿ ದ್ದು, ಈ ಸಂದರ್ಭದಲ್ಲಿ ಬೇಕಲ ಠಾಣಾ ಎಎಸ್ ಐ ಜಯರಾಜ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿತ್ತು.
ಈ ಸಂದರ್ಭದಲ್ಲಿ ಎಎಸ್ ಐ ಜಯರಾಜ್ ರವರನ್ನು ಆರೋಪಿಗಳ ತಂಡ ಇರಿದು ಗಾಯಗೊಳಿಸಿತ್ತು. ಗಂಭೀರ ಗಾಯಗೊಂಡ ಎ ಎಸ್ ಐ ಜಯರಾಜ್ ಹಲವು ದಿನಗಳ ಕಾಲ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಪ್ರಕರಣದ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.