ಕುಂದಾಪುರ, ಜ 18(SM): ಅಕ್ರಮವಾಗಿ ಚಿರತೆ ಚರ್ಮವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಚರ್ಮ ಸಹಿತ ಹತ್ತು ಜನ ಆರೋಪಿಗಳು ಸಿಕ್ಕಿ ಬಿದ್ದ ಘಟನೆ ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಸಿಐಡಿ ಅರಣ್ಯ ಘಟಕ ಬೆಂಗಳೂರು ಇವರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಾರದೊಳಗೆ ನಡೆದ ಮೂರನೇ ಪ್ರಕರಣ ಇದಾಗಿದೆ.
ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಆರೋಪಿಗಳನ್ನು ಕಾರವಾರ ಜಿಲ್ಲೆಯ ಮುಂಡಗೋಡ ತಾಲೂಕಿನ ಸೂರಜ್, ಭಟ್ಕಳ ಸಾಗರ ರಸ್ತೆಯ ಕಡುವಿನಕಟ್ಟೆ ನಿವಾಸಿ ರಘು, ಕುಂದಾಪುರ ತಾಲೂಕಿನ ಬೈಂದೂರು ಗ್ರಾಮದ ನಾಗರಾಜ್, ಭಟ್ಕಳದ ಅಡವಳ್ಳಿ ನಿವಾಸಿ ನಾಗರಾಜ್, ಬೇಂಗ್ರೆ ಚಿಂಗಾರಮಕ್ಕಿ ನಿವಾಸಿ ಪ್ರವೀಣ್ ರಾಮ್ ದೇವಾಡಿಗ, ವೆಂಕಟಪುರ ಗ್ರಾಮದ ರಂಗಿನಕಟ್ಟೆಯ ಮೋಹನ ಜಿ. ನಾಯ್ಕ, ಬೈಂದೂರು ತೆಗ್ಗರ್ಸೆ ಕಂಬಳಗದ್ದೆ ರಸ್ತೆ ನಿವಾಸಿ ಸಂಜೀವ ಪೂಜಾರಿ, ವೀರೇಂದ್ರ ಶೆಟ್ಟಿ, ಹೊನ್ನಾವರ ಮಾಗೋಡು ಗ್ರಾಮದ ಜಾಸ್ವನ್ ಹಾಗೂ ಭಟ್ಕಳದ ಸೋನಾರ್ತೇರಿ ವೀಟಿ ರಸ್ತೆ ನಿವಾಸಿ ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ.
ಆರೋಪಿಗಳು ಚಿರತೆ ಚರ್ಮವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಗ್ರಾಹಕರ ಸೋಗಿನಲ್ಲಿ ಮಾತುಕತೆ ನಡೆಸಿದ ಸಿಐಡಿ ಅರಣ್ಯ ಘಟಕ ಬೆಂಗಳೂರು ಇದರ ಡಿವೈಎಸ್ಪಿ ಎಸ್.ಎಸ್.ಕಾಶಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಒಂದು ಹೋಂಡಾ ಮೇಜ್ ಹಾಗೂ ಮಾರುತಿ 800 ಕಾರಿನಲ್ಲಿ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಆಗಮಿಸಿದ್ದು, ಈ ಸಂದರ್ಭ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು ಅಧಿಕಾರಿಗಳಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಚಿರತೆಯ ಚರ್ಮ ಸುಮಾರು ನಾಲ್ಕು ವರ್ಷ ಪ್ರಾಯದ ಚಿರತೆಯದ್ದು ಎಂದು ಅಂದಾಜಿಸಲಾಗಿದೆ. ಕುಂದಾಪುರ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಆರೋಪಿಗಳ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.