ಮಂಗಳೂರು, ಜ 18(SM): ಯು.ಎ.ಇ. ರಾಷ್ಟ್ರದ ಕರೆನ್ಸಿಯಾದ ದಿರಮ್ ನೋಟುಗಳನ್ನು ತೋರಿಸಿ ಜನರನ್ನು ನಂಬಿಸಿ ವಂಚಿಸಲು ಉದ್ದೇಶ ಹೊಂದಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಗರದಲ್ಲಿ ಇಂದು ನಡೆದಿದೆ.
ಜ. 16ರಂದು ಇಬ್ರಾಹಿಂ ಅಲೀಲ್ ಎಂಬವರಿಗೆ ಯುಎಇ ದಿರಮ್ ನೋಟುಗಳನ್ನು ನೀಡುವುದಾಗಿ ನಂಬಿಸಿ ಮಂಗಳೂರಿನ ರಾಮಕಾಂತಿ ಟಾಕೀಸ್ ನ ಬಳಿ ಬರುವಂತೆ ಹೇಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದರು. ಸುಮಾರು 7 ಲಕ್ಷ ರೂಪಾಯಿಗಳ ನೋಟುಗಳು ಇದೆ ಎಂದು ಹಳೇ ದಿನ ಪತ್ರಿಕೆಗಳ ಬಂಡಲುಗಳಿಗೆ ಮೇಲ್ಬಾಗದಲ್ಲಿ ಏಳು ದಿರಂ ನೋಟುಗಳನ್ನು ಸುತ್ತಿ ತೋರಿಸಿದ್ದಾರೆ.
ಈ ವೇಳೆ ಇಬ್ರಾಹಿಂ ಅಲೀಲ್ ರವರು ಸಂಶಯಗೊಂಡು ವಿಚಾರಿಸಿದಾಗ ಆರೋಪಿಗಳು ಸ್ಥಳದಿಂದ ಸೊತ್ತು ಸಮೇತ ಪರಾರಿಯಾಗಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಪಶ್ಚಿಮ ಬಂಗಾಳ ಮೂಲದ ಮಹಮ್ಮದ್ ಸಲೀಂ ಹಾಗೂ ನಸ್ರುಲ್ ಇಸ್ಲಾಂ ಎಂದು ಗುರುತಿಸಲಾಗಿದೆ.