ಉಡುಪಿ, ಜ19(SS): ಆಪರೇಷನ್ ಕಮಲ ಮಾಡಿದ್ದಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾಗೆ ಹಂದಿ ಜ್ವರ ಬಂದಿದೆ ಎಂದಿದ್ದ ಕಾಂಗ್ರೆಸ್ ಬಿ.ಕೆ ಹರಿಪ್ರಸಾದ್ ವಿರುದ್ಧ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕರು ಜವಾಬ್ದಾರಿಯಿಂದ ಮಾತಾಡಲಿ. ಬಿ.ಕೆ.ಹರಿಪ್ರಸಾದ್ ಮಾತಿನ ಮೇಲೆ ನಿಗಾ ಇರಲಿ. 104 ಇದ್ದ ಬಿಜೆಪಿ ಶಾಸಕರ ಸಂಖ್ಯೆ ಈಗ 106ಕ್ಕೆ ಏರಿದೆ. ಮುಂದಿನ ದಿನಗಳಲ್ಲಿ 115 ಆದರೆ ಅದಕ್ಕೆ ಕಾಂಗ್ರೆಸ್ ನಾಯಕರೇ ಹೊಣೆ ಎಂದು ಹೇಳಿದ್ದಾರೆ.
ಹಂದಿಜ್ವರ-ಮಂಗನಕಾಯಿಲೆ ಬಗ್ಗೆ ನಾನು ಚರ್ಚೆ ಮಾಡಲ್ಲ. ಬಿ.ಕೆ ಹರಿಪ್ರಸಾದ್ ಹಿರಿಯ ರಾಜಕಾರಣಿ. ಅವರ ಮಾತಿನ ಮೇಲೆ ನಿಗಾ ಇರಲಿ. ನಿಮ್ಮ ಶಾಸಕರನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ. ಈಗ 106 ಇರುವ ನಂಬರ್ 115 ಆದರೆ ಅದಕ್ಕೆ ನೀವೇ ಹೊಣೆ ಎಂದಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಮ್ಮ ಶಾಸಕರನ್ನು ಭದ್ರ ಮಾಡಿಕೊಳ್ಳಿ. ಕಾಂಗ್ರೆಸ್ ಶಾಸಕರ ಬಗ್ಗೆ ಅವರಿಗೇ ಅನುಮಾನ ಇದೆ. ಸಭೆಯಲ್ಲಿ ಏನೇನಾಗುತ್ತದೋ ಮುಂದೆ ನೋಡೋಣ ಎಂದು ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.