ತಿರುವನಂತಪುರ, ಜ19(SS): ಶಬರಿಮಲೆ ಸ್ವಾಮಿ ಅಯ್ಯಪ್ಪನ ದೇಗುಲಕ್ಕೆ 10 – 50ರ ವಯಸ್ಸಿನ 51 ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ಗೆ ಕೇರಳ ಸರ್ಕಾರ ಹೇಳಿಕೆ ನೀಡಿದೆ. ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕೊಡಬೇಕು ಎನ್ನುವ ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠದ ತೀರ್ಪಿನ ಬಳಿಕ ಇಷ್ಟು ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂಬ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.
ಕೇರಳ ಸರ್ಕಾರವು ನ್ಯಾಯಾಲಯವನ್ನು ತಪ್ಪುದಾರಿಗೆಳೆಯಲು ಯತ್ನಿಸುತ್ತಿದೆ ಎಂದು ಅಯ್ಯಪ್ಪ ಧರ್ಮ ಸೇನಾ (ಎಡಿಎಸ್) ಆರೋಪಿಸಿದೆ. ಋತುಸ್ರಾವ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇವಾಲಯ ಪ್ರವೇಶಿಸುವುದನ್ನು ಎಡಿಎಸ್ ವಿರೋಧಿಸುತ್ತಿದೆ. ಸರ್ಕಾರವು ನೀಡಿದ ಪಟ್ಟಿಯಲ್ಲಿರುವ 51 ಮಹಿಳೆಯರಲ್ಲಿ ಹೆಚ್ಚಿನವರು 50 ವರ್ಷ ದಾಟಿದವರು ಎಂದು ಈ ಸಂಘಟನೆ ಹೇಳಿದೆ.
ಮಾತ್ರವಲ್ಲ, ಪಟ್ಟಿಯಲ್ಲಿರುವ ಐವರು ಮಹಿಳೆಯರನ್ನು ಎಡಿಎಸ್ ಸಂಪರ್ಕಿಸಿದೆ. ಅವರೆಲ್ಲರೂ 50 ವರ್ಷ ದಾಟಿದವರು. ಗುರುತು ಚೀಟಿಗಳಲ್ಲಿ ಈ ಮಹಿಳೆಯರ ವಯಸ್ಸನ್ನು ತಪ್ಪಾಗಿ ನಮೂದಿಸಲಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಇಂತಹ ನಿರ್ಣಾಯಕ ಹೇಳಿಕೆ ನೀಡುವಾಗ ಸರ್ಕಾರವು ವಾಸ್ತವಾಂಶ ಪರಿಶೀಲಿಸಬೇಕಿತ್ತು. ವಾಸ್ತವ ಏನು ಎಂಬುದನ್ನು ಕೋರ್ಟ್ಗೆ ತಿಳಿಸಲಾಗುವುದು ಎಂದು ಸೇನಾ ನಾಯಕ ರಾಹುಲ್ ಈಶ್ವರ್ ಹೇಳಿದ್ದಾರೆ.
ಪಂದಳಂ ಅರಮನೆಯ ಪ್ರತಿನಿಧಿಕೂಡ ಸರ್ಕಾರ ನೀಡಿರುವ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.