ಪ್ರಯಾಗ್ರಾಜ್, ಜ19(SS): ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸುವ ವಿಚಾರದಲ್ಲಿ ಕೇಂದ್ರ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೆಸ್ಸೆಸ್ ಬೇಸರ ವ್ಯಕ್ತಪಡಿಸಿದೆ. ಮಾತ್ರವಲ್ಲ, ಇನ್ನೇನಿದ್ದರೂ 2025ರಲ್ಲಿ ಮಂದಿರ ನಿರ್ಮಾಣವಾಗಲಿದೆ ಎಂದು ಹೇಳಿದೆ.
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ ಅವರು, ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರನ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕಿದೆ. ಇದು ಕೇವಲ ಒಂದು ಮಂದಿರವಷ್ಟೇ ಅಲ್ಲ, ಹಿಂದೂಗಳ ನಂಬಿಕೆಗೆ ಸಂಬಂಧಿಸಿದ ವಿಚಾರವಾಗಿದೆ. ಇನ್ನೇನಿದ್ದರೂ 2025ರಲ್ಲಿ ಮಂದಿರ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
1952ರಲ್ಲಿ ಸೋಮನಾಥ ದೇವಾಲಯ ನಿರ್ಮಿಸಿದ ನಂತರ ಹೇಗೆ ದೇಶ ಪ್ರಗತಿ ಕಂಡಿತೋ ಅದೇ ರೀತಿ 2025ರಲ್ಲಿ ರಾಮ ಮಂದಿರ ನಿರ್ಮಾಣದ ನಂತರ ದೇಶದ ಅಭಿವೃದ್ಧಿ ಮಿಂಚಿನ ವೇಗದಲ್ಲಿ ನಡೆಯುವುದು ನಿಶ್ಚಿತ. ಮಂದಿರ ನಿರ್ಮಾಣದ ನಂತರದ ಫಲ ಮುಂದಿನ 150 ವರ್ಷಗಳಲ್ಲಿ ಗೋಚರಿಸಲಿದೆ ಎಂದರು.
2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೂ ರಾಮ ಮಂದಿರ ನಿರ್ಮಾಣವಾಗುವ ಲಕ್ಷಣಗಳಿಲ್ಲ ಎಂಬುದನ್ನು ಆರೆಸ್ಸೆಸ್ನ ಈ ಹೇಳಿಕೆ ಬಿಂಬಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.