ಮಂಗಳೂರು,ಜ 20(MSP): ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಗೊಂದಲಮಯ ವಾತಾವರಣ ಉಂಟಾಗಿದ್ದು, ಈ ಎಲ್ಲಾ ಗೊಂದಲ ಹಾಗೂ ಸಮಸ್ಯೆಗಳಿಗೂ ಪರಿಹಾರ ಸಿಗಬೇಕು ಎನ್ನುವ ಕಾರಣಕ್ಕೆ ಚರ್ಚಿಸಲು ಶಾಸಕರು ಒಟ್ಟಾಗಿ ಒಂದು ಕಡೆ ಸೇರಿದ್ದೇ ಹೊರತು ರೆಸಾರ್ಟ್ ರಾಜಕಾರಣ ಮಾಡಲು ಅಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನ ಎಲ್ಲಾ ಶಾಸಕರನ್ನು ಒಂದೆಡೆ ಸೇರಿಸಿಕೊಂಡು ಒಗ್ಗಟ್ಟು ಪ್ರದರ್ಶಿಸುವ ಕಾರಣಕ್ಕಾಗಿ ರೆಸಾರ್ಟ್ ಗೆ ಹೋಗಿದ್ದೇವೆಯೇ ವಿನಾ ರೆಸಾರ್ಟ್ ರಾಜಕೀಯ ಮಾಡಲು ಹೋಗಿಲ್ಲ ಎಂದು ಅವರು ತಿಳಿಸಿದ್ದಾರೆ. ಕಾಂಗ್ರೆಸ್ ಶಾಸಕರು ಎಂಟು-ಹತ್ತು ದಿವಸ ಕ್ಷೇತ್ರ ಬಿಟ್ಟು ಎಲ್ಲೂ ನಿಲ್ಲಲಿಲ್ಲ. ನಾವು ಒಗ್ಗಟ್ಟಾಗಿ ಒಂದು ಕಡೆ ಹೋಗಿದ್ದು, ಎಲ್ಲಾ ಗೊಂದಲ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಾಣಲು ಎಂದು ತಿಳಿಸಿದರು.
ಸೃಷ್ಟಿಪಡಿಸಲಾಗಿರುವ ಗೊಂದಲ, ಸಮಸ್ಯೆಗಳಿಗೆ ಯಾವುದೇ ರೀತಿಯ ಪರಿಹಾರ ಇದುವರೆಗೂ ದೊರಕಿಲ್ಲ. ನಮ್ಮ ಎಲ್ಲಾ ಶಾಸಕರು ಒಟ್ಟಾಗಿ ಸೇರಿದರೆ ಮಾತ್ರ ಬಿಜೆಪಿಗೂ ನಾವು ಒಗ್ಗಟ್ಟಾಗಿದ್ದೇವೆ ಎಂದು ತಿಳಿಯುವುದು ಮ್ಮ ಪಕ್ಷದವರು ಯಾರೂ ತಮ್ಮೊಂದಿಗೆ ಬರಲು ತಯಾರಿಲ್ಲ ಎಂದು ಬಿಜೆಪಿಯವರಿಗೆ ಅರಿವಾಗುತ್ತದೆ. ಹೋದವರನ್ನು ಮತ್ತೆ ತಿರುಗಿ ಕರೆಸಿಕೊಳ್ಳಲು ನಾವು ಈ ರೀತಿ ಕ್ರಮ ಕೈಗೊಳ್ಳಬೇಕಾಯಿತು.
ಹೀಗಾಗಿ ಇವಕ್ಕೆಲ್ಲ ಒಂದು ಅಂತ್ಯ ಕಂಡುಕೊಳ್ಳಬೇಕೆಂದು ನಮ್ಮ ಪಕ್ಷದವರು ಹೀಗೆ ಮಾಡಿದ್ದೇವೆ. ಮಾಧ್ಯಮಗಳಲ್ಲಿ ಇಬ್ಬರು ಹೋದರು , ಮೂವರು ಹೋದರು ಎಂಬ ಅಪಪ್ರಚಾರದಿಂದ ಗೊಂದಲ ಸೃಷ್ಟಿಯಾಗುತ್ತಿದೆ. ಈ ಎಲ್ಲಾ ಗೊಂದಲಗಳಿಗೆ ಅಂತ್ಯ ಕಾಣುವ ಉದ್ದೇಶದಿಂದ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.