ಗಂಗೊಳ್ಳಿ,ಜ 21(MSP): ಮೀನುಗಾರಿಕೆ ತೆರಳಿದ ಸಂದರ್ಭ ಬೋಟುಗಳು ಅವಘಡಕ್ಕೀಡಾದರೆ ಅಥವಾ ಸಮುದ್ರದಲ್ಲಿ ದೇಶದ್ರೋಹಿ ಚಟುವಟಿಕೆ ಮತ್ತಿತರ ಘಟನೆಗಳು ಕಂಡುಬಂದರೆ ಮಾಹಿತಿ ನೀಡಲು ಅನುಕೂಲವಾಗಲು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆಯಿರುವ ಸ್ಟಿಕರ್ ಗಳನ್ನು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ ವತಿಯಿಂದ ಮೀನುಗಾರರಿಗೆ ವಿತರಿಸಲಾಯಿತು.
ಕರಾವಳಿ ಪೊಲೀಸ್ ಠಾಣೆ ಸಹಾಯಕ ಉಪನಿರೀಕ್ಷಕ ಆಗಸ್ಟಿನ್ ಕ್ವಾರ್ಡಸ್ ಮತ್ತು ಹೆಡ್ ಕಾನ್ ಸ್ಟೇಬಲ್ ಸುರೇಶ್ ಸ್ಟಿಕ್ಕರ್ ಗಳನ್ನು ಬೋಟುಗಳಿಗೆ ಹಚ್ಚುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು. ಸ್ಟಿಕರ್ ನಲ್ಲಿ ಕರಾವಳಿ ಕಾವಲು ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ, ಗಂಗೊಳ್ಳಿ ಕರಾವಳಿ ಪೊಲೀಶ್ ಠಾಣೆ ದೂರವಾಣಿ ಸಂಖ್ಯೆಯನ್ನು ಮುದ್ರಿಸಲಾಗಿದೆ. ಸ್ಟಿಕರ್ ಗಳನ್ನು ಎಲ್ಲಾ ಬೋಟುಗಳಿಗೆ ಉಚಿತವಾಗಿ ನೀಡಲಾಯಿತು.
ಗಂಗೊಳ್ಳಿ ಕರಾವಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಲಾ ಮೀನುಗಾರರು ಸ್ಟಿಕ್ಕರ್ ಪಡೆದುಕೊಂಡು ದೋಣಿ ಹಾಗೂ ಬೋಟುಗಳಿಗೆ ಅಂಟಿಸಬೇಕು. ತುರ್ತು ಸಂದರ್ಭ ಸ್ಟಿಕ್ಕರ್ ನಲ್ಲಿರುವ ಯಾವುದಾದರೂ ಒಂದು ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಮೀನುಗಾರಿಗೆ ಸಹಾಯ ಮಾಡಲು ಅನುಕೂಲಕರವಾಗಿರುತ್ತದೆ ಎಂದು ಗಂಗೊಳ್ಳಿ ಕರಾವಳಿ ಪೊಲೀಸ್ ಠಾಣೆಯವರು ತಿಳಿಸಿದ್ದಾರೆ.