ತುಮಕೂರು,ಜ 21(MSP): ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕಯೋಗಿ ಸಿದ್ಧಗಂಗಾ ಮಠಾಧೀಶ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಇಂದು ವಿಧಿವಶರಾಗಿದ್ದಾರೆ. ನೂರಹನ್ನೆರಡು ಸಂವತ್ಸರ, ಶತಮಾನದ ಪಲ್ಲಟಗಳಿಗೆ ಸಾಕ್ಷಿಯಾಗಿರುವ, ಸರಳ, ಸಜ್ಜನಿಕೆ, ಮಮತೆ, ನಿಸ್ವಾರ್ಥಗಳ ಸಾಕಾರಮೂರ್ತಿ. ಇಂತಹ ಅಪರೂಪದ ಕಾಯಕ ಯೋಗಿಯನ್ನು ಕಳೆದುಕೊಂಡು ಸಿದ್ದಗಂಗಮಠ ಇಂದು ಅನಾಥವಾಗಿದೆ.
ಮಂಗಳವಾರ ಸಂಜೆ ಕ್ರಿಯಾಸಮಾಧಿ:
ಶತಾಯುಷಿ ಡಾ.ಶಿವಕುಮಾರ್ ಸ್ವಾಮೀಜಿ ಸೋಮವಾರ ಬೆಳಗ್ಗೆ 11.44ಕ್ಕೆ ಲಿಂಗಕ್ಯರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಗಂಗಾ ಶ್ರೀಗಳಿಗೆ ವೈದ್ಯರ ಹಲವಾರು ಉತ್ತಮ ಚಿಕಿತ್ಸೆ ನೀಡಿಯೂ ಫಲನೀಡಿಲ್ಲ. ಕಳೆದ ಕೆಲವು ದಿನಗಳಿಂದ ಜವರಾಯನ ಜೊತೆ ಹೋರಾಡಿ ಶಿವೈಕ್ಯರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾದ್ಯಮದವರ ಜೊತೆ ಮಾತನಾಡುತ್ತ ಮಧ್ಯಾಹ್ನ 2ಗಂಟೆಗೆ ಮಾಹಿತಿ ನೀಡಿದ್ದಾರೆ.
ಮಂಗಳವಾರ ಸಂಜೆ 4.30ಕ್ಕೆ ಸ್ವಾಮೀಜಿಯವರ ಕ್ರಿಯಾಸಮಾಧಿ ನಡೆಯಲಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರಿಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಕ್ತರು ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.
ಸಾರ್ಥಕ ಬದುಕು
ಡಾ.ಶಿವಕುಮಾರ ಶ್ರೀಗಳದ್ದು ಸಾರ್ಥಕ ಬದುಕು. ಅಂದಿನಿಂದ ಇಂದಿನವರೆಗೂ ಶ್ರೀಗಳದ್ದು ಮೌನಕ್ರಾಂತಿ. ಎಲ್ಲರೂ ನನ್ನವರೆನ್ನುವ ಭಾವದ ವಿಶ್ವಮಾನವ ಸಂದೇಶ ಸಾರಿದ ಕಾಯಕಯೋಗಿ. ಕಾಯಕವೇ ಕೈಲಾಸ’– ಶರಣರ ಈ ತತ್ವವನ್ನು ದೀರ್ಘಕಾಲದ ಬದುಕಿನುದ್ದಕ್ಕೂ ಅಳವಡಿಸಿಕೊಂಡವರು ಸ್ಫೂರ್ತಿಯ ಸೆಲೆ, ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ. ಶ್ರೀಗಳದ್ದೂ ಬದುಕಿನುದ್ದಕ್ಕೂ ಮಿತ ಆಹಾರ ಸೇವನೆ, ನಿರಂತರ ಕಾಯಕದಲ್ಲಿ ಶಿವನ್ನು ಕಂಡುಕೊಂಡವರು, ಬಿಡುವಿದ್ದಾಗ ಓದು ಹಾಗೂ ಇಷ್ಟಲಿಂಗ ಪೂಜೆ, ಇವುಗಳೇ ಶಿವಕುಮಾರ ಸ್ವಾಮೀಜಿಯ ಶ್ರದ್ಧೆಯ ಗುಟ್ಟು ಎನ್ನಬಹುದು. ಬೆಳಗಿನ ಜಾವ 2:15 – ಸ್ವಾಮೀಜಿ ನಿತ್ಯ ಏಳುತ್ತಿದುದು ಇದೇ ಹೊತ್ತಿಗೆ. ನಿತ್ಯ ಕರ್ಮ, ಶಿವ ಪೂಜೆ, ತತ್ವ ಪಠಣ, ಹೀಗೆ ಶುರುವಾಗುವ ದಿನಚರಿಗೆ ವಿಶ್ರಾಂತಿ ಸಿಗುತ್ತಿದುದು ರಾತ್ರಿ 11ರ ನಂತರವೇ.
ಆದರೆ ಶತಮಾನದ ಪಲ್ಲಟಗಳಿಗೆ ಸಾಕ್ಷಿಯಾಗಿರುವ ಡಾ| ಶಿವಕುಮಾರ್ ಸ್ವಾಮೀಜಿ ಅವರು ಇಂದು ಚಿಕಿತ್ಸೆಗೆ ಸ್ಪಂದಿಸದೇ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ. ನಡೆದಾಡುವ ದೇವರನ್ನು ಕಳೆದುಕೊಂಡ ಸಿದ್ದಗಂಗಾ ಮಠದಲ್ಲಿ ಅನಾಥರಾದ ಭಾವ ಕಾಡುತ್ತಿದೆ.
ಶ್ರೀಗಳ ಪೂರ್ವಶ್ರಮದ ಬಗ್ಗೆ ಒಂದಿಷ್ಟು ಮಾಹಿತಿ:
ಮಾಗಡಿ ತಾಲೂಕಿನ ವೀರಾಪುರದ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮನವರಿಗೆ ಎಪ್ರಿಲ್ 1, 1907ರಲ್ಲಿ 12ನೇ ಮಗುವಾಗಿ ಶಿವಣ್ಣನವರಾಗಿ ಜನಿಸಿದರು. ಹೊನ್ನೆಗೌಡ ದಂಪತಿಗಳಿಗೆ ಎಂಟು ಜನ ಗಂಡು ಮಕ್ಕಳು ಹಾಗೂ ಐದು ಹೆಣ್ಣು ಮಕ್ಕಳು, ಎಲ್ಲರಿಗಿಂತಲೂ ಕಿರಿಯರಾದ ಶಿವಣ್ಣನವರೆಂದರೆ ತಂದೆ ತಾಯಿಗಳಿಗೆ ಅಪಾರ ಪ್ರೀತಿ. ವೀರಾಪುರದಲ್ಲಿಯೇ ಇದ್ದ ಕೂಲಿಮಠ ದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು. ಅನಂತರ ಪ್ರಾಥಮಿಕ ಶಾಲೆಗಾಗಿ ಪಕ್ಕದಲ್ಲಿಯೇ ಇರುವ ಪಾಲನಹಳ್ಳಿಯ ಶಾಲೆಗೆ ದಾಖಲಾದರು.
ತಮ್ಮ ಶಾಲಾ ಪ್ರಾಥಮಿಕಾ ಶಾಲಾ ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಡ ಶಿವಣ್ಣ ಅನಂತರ ಬೆಳೆದಿದ್ದು ಅಕ್ಕನ ಆಸರೆಯಲ್ಲಿ. ತುಮಕೂರು ಬಳಿ ಇರುವ ನಾಗವಲ್ಲಿ ಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದ ಶಿವಣ್ಣ 1922ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು 1926ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು.ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಇದೇ ವರ್ಷ 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳವರೊಡನಾಟ ಆಯಿತು.
ನಂತರ ಮಾರ್ಚ್ 3, 1930ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದ್ದರು.