ಕೇರಳ, ಜ 21(SM): ಸಾಮಾಜಿಕ ಜಾಲ ತಾಣಗಳು ಇಂದು ಚಿಟಿಕೆ ಹೊಡೆಯುವಷ್ಟರಲ್ಲಿ ಸಂದೇಶ, ವಿಚಾರಗಳನ್ನು ಕ್ಷಣಮಾತ್ರದಲ್ಲೇ ರವಾನಿಸುತ್ತದೆ. ಮಾತ್ರವಲ್ಲದೆ, ಜಗತ್ತಿನ ಯಾವುದೇ ಮೂಲೆಯ ವಿಚಾರಗಳು ಬೇಗನೆ ವಿನಿಮಯಗೊಳ್ಳುತ್ತವೆ. ಆದರೆ, ಇಂತಹ ಮಾಧ್ಯಮಗಳನ್ನು ಅನೇಕರು ದುರುಪಯೋಗ ಪಡಿಸುತ್ತಿದ್ದಾರೆ. ಇಲ್ಲೊಬ್ಬ ಭೂಪ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಮೂಲಕ ನಟಿಯೊಬ್ಬಳಿಗೆ ಅಶ್ಲೀಲ ಮೆಸೇಜ್ ಮಾಡಿದ್ದು, ಆತನಿಗೆ ನಟಿ ಖಾರವಾಗಿ ರಿಯಾಕ್ಟ್ ನೀಡಿದ್ದಾರೆ.
ಮಲಯಾಳಂ ನಟಿ ಗಾಯತ್ರಿ ಅರುಣ್ ಅವರಿಗೆ 18ರ ಯುವಕನೊಬ್ಬ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ. ''ನನ್ನ ಜೊತೆ ಒಂದು ರಾತ್ರಿ ಬರ್ತಿಯಾ.. ಎರಡು ಲಕ್ಷ ಕೊಡುವೆ. ಈ ವಿಷಯ ನಮ್ಮಿಬ್ಬರ ನಡುವೆಯೇ ಇರಲಿದೆ. ಕೇವಲ ಒಂದು ಗಂಟೆಗೆ ಎರಡು ಲಕ್ಷ ಕೊಡುವೆ'' ಎಂದು ಕಾಮುಕ ಯುವಕ ರೋಹನ್ ಕುರಿಯಾಕೋಸ್ ಫೇಸ್ ಬುಕ್ ನಲ್ಲಿ ಸಂದೇಶ ರವಾನಿಸಿದ್ದಾನೆ.
ಇದನ್ನು ನೋಡಿ ಸುಮ್ಮನೆ ಕೂರದ ನಟಿ ಗಾಯತ್ರಿ ಅರುಣ್ ''ಮಿಸ್ಟರ್ ರೋಹನ್ ಕುರಿಯಾಕೋಸ್... ನಿನ್ನ ತಾಯಿ/ಸಹೋದರಿಯ ಸುರಕ್ಷತೆ ಬಗ್ಗೆ ಪ್ರಾರ್ಥಿಸಲು ನಾನು ಖಂಡಿತ ನೆನಪಿಸಿಕೊಳ್ಳುವೆ'' ಎಂದು ಚಳಿ ಬಿಡಿಸಿದ್ದಾರೆ.
ಇನ್ನು ''ಅಸಭ್ಯ ಸಂದೇಶ ಕಳುಹಿಸುವವರಿಗೆ ಭಯ ಇಲ್ಲದೇ ಇರುವಾಗ, ಅದನ್ನ ಬಹಿರಂಗ ಪಡಿಸಲು ನಾನ್ಯಾಕೆ ಭಯ ಪಡಲಿ.? ಆ ಯುವಕನಿಗೆ ಇನ್ನೂ 17 ವರ್ಷ. ಪೊಲೀಸ್ ಕಂಪ್ಲೇಂಟ್ ಕೊಡದಂತೆ ಆತನ ತಂದೆ-ತಾಯಿ ಮನವಿ ಮಾಡಿದ್ರಿಂದ, ಸುಮ್ಮನಾಗಿದ್ದೀನಿ'' ಎಂದು ಇದೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಂದರ್ಶನವೊಂದರಲ್ಲಿ ಗಾಯತ್ರಿ ಅರುಣ್ ಹೇಳಿದ್ದಾರೆ.