ಬೆಂಗಳೂರು,ಜ 22(MSP) : ರೆಸಾರ್ಟ್ ರಾಜಕೀಯದ ಇನ್ನೊಂದು ಮುಖ ಬಿಚ್ಚಿಕೊಳ್ಳಲಾರಂಭಿಸಿದೆ. ಈಗಲ್ಟನ್ ರೆಸಾರ್ಟ್ನಲ್ಲಿ ಮದ್ಯಪಾನ ಮಾಡಿದ ‘ಕೈ’ ಶಾಸಕರು ಭಾನುವಾರ ನಸುಕಿನಲ್ಲಿ ಹೊಡೆದಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ವಿರುದ್ದ ಹೊಸಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಬಿಡದಿ ಠಾಣೆಯಲ್ಲಿ ದೂರು ನೀಡಿದ್ದು ಗಣೇಶ್ ವಿರುದ್ದ ಇದೀಗ ಐಪಿಸಿ ಸೆಕ್ಷನ್ 323 (ಹಲ್ಲೆ), 324, 307 (ಕೊಲೆ ಯತ್ನ), 504 (ಶಾಂತಿ ಕದಡುವುದು), 506 (ಜೀವ ಬೆದರಿಕೆ) ಅಡಿ ಎಫ್ಐಆರ್ ದಾಖಲಾಗಿದೆ.
ಶಾಸಕ ಆನಂದ್ ಸಿಂಗ್
ಕಂಪ್ಲಿ ಶಾಸಕ ಜೆ.ಎನ್. ಗಣೇಶ್
ಇನ್ನೊಂದೆಡೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಶಾಸಕ ಗಣೇಶ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದ್ದು, ಅಂತರಿಕ ತನಿಖೆಗಾಗಿ ಸಮಿತಿ ರಚಿಸಿದೆ.
ಸ್ವಾರಸ್ಯಕರ ವಿಚಾರವೆಂದರೇ ಕುಡಿದ ಮತ್ತಿನಲ್ಲಿದ್ದ ಶಾಸಕ ಗಣೇಶ್ ತನ್ನ ಗನ್ ಮ್ಯಾನ್ ಗೂ ಕಚ್ಚಿ ಗಾಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಆನಂದ್ ಸಿಂಗ್ ನೀಡಿದ ದೂರಿನಲ್ಲಿ ಏನಿದೆ?
‘ಶನಿವಾರದಂದು ತಡರಾತ್ರಿ ಎರಡು ಗಂಟೆ ಸುಮಾರಿಗೆ ಈಗಲ್ಟನ್ ರೆಸಾರ್ಟಿನಲ್ಲಿ ಪಕ್ಷದ ಎಲ್ಲಾ ಮುಖಂಡರು, ಶಾಸಕರು ಲೋಕಸಭಾ ಚಿನಾವಣೆ ತಯಾರಿ, ಪಕ್ಶ ಸಂಘಟನೆ ಕುರೊತು ಚರ್ಚೆ ನಡೆಸುತ್ತಿದ್ದೆವು. ಬಳಿಕ ನಾನು ಸೇರಿದಂತೆ ತುಕಾರಾಂ, ಶಾಸಕರಾದ ರಘುಮೂರ್ತಿ, ತನ್ವೀರ್ ಸೇಠ್, ರಾಮಪ್ಪ ಇತರರು ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿ ಕೊಠಡಿಗೆ ತೆರಳುತ್ತಿದ್ದೆವು. ಈ ಸಂದರ್ಭ ಅಲ್ಲಿಗೆ ಬಂದ ಶಾಸಕ ಗಣೇಶ್, ಏಕಾಏಕಿ ಹಲ್ಲೆ ನಡೆಸಿದರು. ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ಮುಖಂಡರನ್ನು ನನ್ನ ವಿರುದ್ದ ಎತ್ತಿ ಕಟ್ಟುತ್ತೀಯಾ ಎಂದು ಬೈಯುತ್ತಾ ನನ್ನ ಮುಖಕ್ಕೆ ಗುದ್ದಿ, ತಲೆಯನ್ನು ಗೋಡೆಗೆ ಗುದ್ದಿಸಿದರು’ ಎಂದು ಆನಂದ್ ಸಿಂಗ್ ಹೇಳಿದ್ದಾರೆ.
‘ಎಲ್ಲಿ ನನ್ನ ಬಂದೂಕು. ನಿನ್ನನ್ನು ಈಗಲೇ ಮುಗಿಸುತ್ತೇನೆ ಎಂದು ಹುಡುಕಾಡಿದರು. ಬಂದೂಕು ಸಿಗದೇ ಹೋದಾಗ ನನ್ನ ಎದೆಯ ಭಾಗಕ್ಕೆ, ಕಿಬ್ಬೊಟ್ಟೆಯ ಭಾಗಕ್ಕೆ ಕಾಲಿನಿಂದ ಬಲವಾಗಿ ಒದ್ದರು. ಹೂಕುಂಡ ತೆಗೆದು ನನ್ನ ತಲೆಗೆ ಹೊಡೆದರು. ಇದರಿಂದಾಗಿ ನಾನು ಪ್ರಜ್ಞೆ ತಪ್ಪಿದೆ’ ಎಂದು ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.