ತುಮಕೂರು ಜ 22(MSP): ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ತಮ್ಮ ಜೀವನದಿಂದಲೇ ಎಲ್ಲರಿಗೆ ಆದರ್ಶವಾಗಿದ್ದವರು. ಆದರೆ ಅಂತಹಾ ಸ್ವಾಮೀಜಿಗಳೂ ಸಹ ತಮ್ಮ ಪೋಷಕರ ಮೇಲಿನ ಬೇಸರದಿಂದ 25 ವರ್ಷ ಹುಟ್ಟೂರಿಗೆ ಕಾಲಿಡಲಿಲ್ಲ ಎನ್ನುವುದು ಅಚ್ಚರಿಯ ಸತ್ಯ. ಇನ್ನೊಂದು ಅರ್ಶ್ಚರ್ಯಕರ ಸಂಗತಿ ಎಂದರೆ ಶ್ರೀಗಳು ಒಮ್ಮೆಯೂ ವಿದೇಶಕ್ಕೆ ತೆರಳಲಿಲ್ಲ.
ಹೌದು ಅವರ ಜೀವಿತಾವಧಿಯ 111 ವರ್ಷದಲ್ಲಿ ಒಮ್ಮೆಯೂ ವಿದೇಶಕ್ಕೆ ಹೋಗಿರಲಿಲ್ಲ. ಸನ್ಯಾಸ ದೀಕ್ಷೆಯಲ್ಲೇ 89 ವರ್ಷ ಕಳೆದಿದ್ದ ಅವರಿಗೆ ವಿದೇಶದ ಪ್ರಯಾಣಕ್ಕಿಂತ ಗ್ರಾಮೀಣ ಜನರ ಒಡನಾಟವೇ ಸಾಕು ಎಂದು ಹಲವು ಬಾರಿ ಹೇಳಿದ್ದರು. ಹೀಗಾಗಿ ಅವರು ಹೆಚ್ಚಾಗಿ ಮಠ,ಹಳ್ಳಗಳತ್ತಲೇ ಪ್ರಯಾಣಿಸುತ್ತಿದ್ದರು. ಇದಲ್ಲದೇ ತಾವೂ ಮಠ ತೊರೆದು ದೂರದ ವಿದೇಶಗಳಿಗೆ ತೆರಳಿದರೆ ನಿತ್ಯದ ನಿಷ್ಟೆಯ ಶಿವಪೂಜೆ, ದಾಸೋಹ ಕೈಂಕರ್ಯಕ್ಕೆ ತೊಂದರೆಯಾಗಬಹುದು ಎಂದು ಶ್ರೀಗಳ ನಿಲುವಾಗಿತ್ತು.
ಇನ್ನೂ ತಾವು ಹುಟ್ಟಿ ಬೆಳೆದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ವೀರಾಪುರಕ್ಕೆ 25 ವರ್ಷ ಕಾಲಿಟ್ಟಿರಲಿಲ್ಲ. ಶ್ರೀಗಳ ಹೆತ್ತವರಿಗೆ ಮಗ ಸನ್ಯಾಸಿಯಾಗಲಿದ್ದಾನೆ ಎನ್ನುವುದು ತಿಳಿದು ಅವರು ತುಂಬಾ ದುಃಖಿತರಾಗಿದ್ದರು. ಆ ಕಾಲದಲ್ಲಿ ಬಿ.ಎ ಓದಿದ ಶ್ರೀಗಳು ಉನ್ನತ ಅಧಿಕಾರಿಯಾಗಬೇಕು ಎಂದು ಹೆತ್ತವರು ಬಯಸಿದ್ದರು.
ಇದನ್ನು ತಿಳಿದ ಶ್ರೀಗಳ ಗುರು ಶಿವಯೋಗಿಗಳು ತಾವೇ ಸ್ವತಃ ವೀರಾಪುರಕ್ಕೆ ತೆರಳಿ ಶಿವಕುಮಾರಶ್ರೀಗಳ ಹೆತ್ತವರಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದ್ದರು. ಆದರೆ ಶಿವಯೋಗಿಗಳು ಬಂದಾಗ ಅವರಿಗೆ ಸಿಗದಂತೆ ಹೆತ್ತವರು ಮನೆಯಿಂದ ದೂರ ತೆರಳಿದ್ದರು. ಇದರಿಂದ ನೊಂದ ಗುರು ಶಿವಯೋಗಿಗಳು ಅಲ್ಲಿಂದ ಸಿದ್ದಗಂಗೆಗೆ ನಡೆದೇ ಬಂದಿದ್ದರು.ಇದನ್ನು ಕೇಳಿದಾಗ ಗುರುಗಳ ಮೇಲೆ ಅಪಾರ ಭಕ್ತಿ ಇದ್ದ ಸ್ವಾಮೀಜಿಗೆ ಬಹಳ ಬೇಸರವಾಗಿತ್ತು.
ತಮ್ಮ ಹೆತ್ತವರ ವರ್ತನೆ, ಶ್ರೀಗಳಿಗಳನ್ನು ಅಲಕ್ಷಿಸಿದ್ದು ಅವರಿಗೆ ಬಹಳ ದಿನದವರೆಗೆ ನೋವು ನೀಡಿತು. ಇದೇ ಕಾರಣಕ್ಕೆ ಅವರು ವೀರಾಪುರಕ್ಕೆ ತೆರಳುವುದನ್ನೇ ಬಿಟ್ಟರು.ಆದರೆ ವೀರಾಪುರ ಗ್ರಾಮಸ್ಥರು 1930ರಿಂದ 1955ರ ವರೆಗೂ ತಮ್ಮ ಗ್ರಾಮಕ್ಕೆ ಸ್ವಾಮೀಜಿ ಭೇಟಿ ನೀಡಬೇಕೆಂದು ಕೇಳಿಕೊಳ್ಳುತ್ತಲೇ ಇದ್ದರು. ಆದರೆ ಸ್ವಾಮಿಗಳು ಅವರ ಆಹ್ವಾನಗಳನ್ನು ನಯವಾಗಿಯೇ ತಿರಸ್ಕರಿಸುತ್ತಿದ್ದರು.
ಕೊನೆಗೊಮ್ಮೆ ಶ್ರೀಗಳ ಪೂರ್ವಾಶ್ರಮದ ಅಣ್ಣನ ಮಗ ವೀರಾಪುರದಲ್ಲಿ ಮನೆ ಕಟ್ಟಿದ್ದನು. ಆ ಮನೆ ಗೃಹ ಪ್ರವೇಶಕ್ಕೆ ಅವರು ಶ್ರೀಗಳನ್ನು ಆಹ್ವಾನಿಸಿದ್ದರು. ಆದರೆ ಶ್ರೀಗಳು ಸುತರಾಂ ಒಪ್ಪಿರಲಿಲ್ಲ. ಆಗ ಆತ "ಶಿವಯೋಗಿಗಳ ಅನುಗ್ರಹ ಸಿಕ್ಕದ ಆ ಮನೆಗೆ ನಾನೆಂದಿಗೂ ಪ್ರವೇಶಿಸಲಾರೆ. ಆ ಮನೆ ಪಾಳು ಬಿದ್ದರೂ ಸರಿ" ಎಂದು ಖಡಾಖಂಡಿತವಾಗಿ ನುಡಿದರು. ಕೊನೆಗೆ ಆ ಮಾತಿಗೆ ಕಟ್ಟುಬಿದ್ದು ಗೃಹಪ್ರವೇಶಕ್ಕೆ ಬರುವುದಾಗಿ ಮಾತು ನೀಡಿದರು. ಹೀಗೆ ತಾವು 25 ವರ್ಷ ಕಾಲದ ನಂತರ ತಮ್ಮ ಹುಟ್ಟೂರಿಗೆ ಶ್ರೀಗಳು ಆಗಮಿಸಿದ್ದರು.