ಉತ್ತರಪ್ರದೇಶ, ಜ22(MSP): ಭಾರತದಲ್ಲಿರುವ ಎಲ್ಲಾ ಮದರಸ ಕೇಂದ್ರಗಳನ್ನು ಮುಚ್ಚಬೇಕು. ಮದರಸದಲ್ಲಿ ಮುಗ್ದ ಮನಸ್ಸಿನ ಮಕ್ಕಳಲ್ಲಿ ಐಸಿಸ್ ವಿಚಾರಧಾರೆಗಳನ್ನು ತುಂಬಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಶಿಯಾ ವಕ್ಪ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಸೀಂ ರಿಜ್ವಿ ಪತ್ರವೊಂದನ್ನು ಬರೆದಿದ್ದು, ಇಸ್ಲಾಮಿಕ್ ಶಿಕ್ಷಣದ ನೆಪದಲ್ಲಿ ಮದರಸದಲ್ಲಿ ಮುಸ್ಲಿಂ ಮಕ್ಕಳ ಮನಸ್ಸಿನಲ್ಲಿ ಉಗ್ರವಾದವನ್ನು ತುಂಬಿಸಲಾಗುತ್ತಿದೆ ಹೀಗಾಗಿ ಮದರಸಗಳನ್ನು ಮುಚ್ಚಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಕ್ಕಳ ಮನಸ್ಸಿನಲ್ಲಿ ಉಗ್ರವಾದವನ್ನು ತುಂಬುವುದು ಇಸ್ಲಾಂ ಧರ್ಮಕ್ಕೂ ದೇಶಕ್ಕೂ ಮಾರಕವಾಗಿದೆ. ಇಂತಹ ಮಕ್ಕಳು ದೇಶದ ಇತರ ಧರ್ಮಗಳಿಂದ, ಸಮಾಜದಿಂದ ದೂರವಾಗುತ್ತಾರೆ. ಹೀಗಾಗಿ ಪ್ರಾಥಮಿಕವಾಗಿರುವ ಮದರಸಗಳನ್ನು ಮುಚ್ಚಬೇಕು. ಶಾಲೆಗಳಲ್ಲಿ ಶೈಕ್ಷಣಿಕ ಶಿಕ್ಷಣ ಪಡೆದ ಬಳಿಕ ಮುಸ್ಲಿಂ ಯುವಕರು ಮುಂದೆ ಇಸ್ಲಾಂ ಧರ್ಮದ ಬಗ್ಗೆ ತಮ್ಮ ಸಂಸ್ಕೃತಿ ಬಗ್ಗೆ ಹೆಚ್ಚಿನ ಜ್ಞಾನ ಪಡೆಯಲು ಇಚ್ಚಿಸಿದರೆ ಮಾತ್ರ ಅಧ್ಯಯನಕ್ಕಾಗಿ ಮದರಸಗಳಲ್ಲಿ ಅಭ್ಯಾಸಿಸಬಹುದು ಎಂದು ತಮ್ಮ ಪತ್ರದಲ್ಲಿ ರಿಜ್ವಿ ಉಲ್ಲೇಖಿಸಿದ್ದಾರೆ.
ಇದಲ್ಲದೆ ಅವರು ನೀಡಿದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂಬರುವ 15 ವರ್ಷದಲ್ಲಿ ಭಾರತದಲ್ಲಿರುವ ಮುಸ್ಲಿಂರಲ್ಲಿ ಅರ್ಧದಷ್ಟು ಮಂದಿ ಐಸಿಸ್ ಬೆಂಬಲಿಗರಾಗುವುದು ಖಂಡಿತಾ ಎಂದು ಹೇಳಿದ್ದಾರೆ.