ತುಮಕೂರು, ಜ 21(SM): 'ನಡೆದಾಡುವ ದೇವರು', ತ್ರಿವಿಧ ದಾಸೋಹಿ, ಶತಮಾನದ ಸಂತ, ಕರ್ನಾಟಕ ರತ್ನ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಯಲ್ಲಿ ಲೀನವಾದರು. ಲಕ್ಷಾಂತರ ಭಕ್ತ ಸಾಗರ ಕಣ್ಣೀರಧಾರೆ ಸುರಿಸಿ ತಮ್ಮ ನೆಚ್ಚಿನ ನಡೆದಡುವ ದೇವರಿಗೆ ವಿದಾಯ ಹೇಳಿದರು. ಇದೀ ತುಮಕೂರಿಗೆ ತುಮಕೂರು ಶೋಕಸಾಗರದಲ್ಲಿ ಮುಳುಗಿತ್ತು.
ಸೋಮವಾರ ಬೆಳಗ್ಗೆ 11:44 ಕ್ಕೆ ಅವರು ಲಿಂಗೈಕ್ಯರಾಗಿದ್ದರು. ಕೋಟ್ಯಂತರ ಭಕ್ತರ ತೊರೆದು ಶಿವನೆಡೆಗೆ ನಡೆದರು. ವಯೋಸಹಜ ಅನಾರೋಗ್ಯದಿಂದಾಗಿ ತನ್ನ 111ನೇ ವರ್ಷ ವಯಸ್ಸಿನಲ್ಲಿ ಶಿವಕುಮಾರ ಶ್ರೀಗಳು ಲಿಂಗೈಕ್ಯರಾದರು. ಕಳೆದ ತಿಂಗಳಷ್ಟೇ ಚೆನ್ನೈಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನಂತರ ಡಿಸ್ಚಾರ್ಜ್ ಆಗಿ ಮಠಕ್ಕೆ ವಾಪಸ್ಸಾಗಿದ್ದ ಅವರು ಚೇತರಿಸಿಕೊಂಡಿದ್ದರು.
ಆದರೆ ಭಾನುವಾರ ರಾತ್ರಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿತ್ತು. ಸೋಮವಾರ ಬೆಳಗ್ಗೆ ಅವರ ದೇಹ ಚಿಕಿತ್ಸೆಗೆ ಸ್ಪಂದಿಸದ ಕಾರಣ ಶತಾಯುಷಿ ಸಂತ ಶಿವಕುಮಾರ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿದ್ದರು.
ಅಪಾರ ಭಕ್ತ ಸಮೂಹ ಶ್ರೀಗಳ ಅಂತಿಮ ದರ್ಶನ ಪಡೆಯಿತು. ಮಂಗಳವಾರ ರಾತ್ರಿ ನಡೆದ ಅಂತ್ಯ ಸಂಸ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.
ಕಳೆದ ಎರಡು ದಿನದಲ್ಲಿ ಹಗಲು ರಾತ್ರಿ ಎನ್ನದೆ ಸುಮಾರು 10 ಲಕ್ಷಕ್ಕೂ ಅಧಿಕ ಜನರು ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದರು.