ಕುಂದಾಪುರ, ಜ 22(SM): ತಾನು ಕೆಲಸಕ್ಕಿದ್ದ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ಹಣ ದರೋಡೆಗೈದು ಪರಾರಿಯಾಗಿದ್ದ ಆರೋಪಿ ಹಾಗೂ ಆತನ ಪತ್ನಿಯನ್ನು ಸೊತ್ತು ಸಮೇತ ವಶಕ್ಕೆ ಪಡೆದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಬಂಧಿತ ಆರೋಪಿ ದಂಪತಿಗಳನ್ನು ಕುಂದಾಪುರ ತಾಲೂಕಿನ ಉಪ್ಪುಂದ ಶಾಲೆ ಬಾಗಿಲು ಮಯ್ಯರಕೇರಿ ನಿವಾಸಿ ಶ್ರೀಧರ ಆತನ ಪತ್ನಿ ಸ್ವಾತಿ ಎಂದು ಗುರುತಿಸಲಾಗಿದೆ. ಆರೋಪಿ ಶ್ರೀಧರ ಕಂದಾವರ ಗ್ರಾಮದ ಸಟ್ವಾಡಿ ದಿನಕರ ಶೆಟ್ಟಿ ಎಂಬುವರ ಮನೆಯಲ್ಲಿ ಮನೆ ಕೆಲಸಕ್ಕಿದ್ದನೆನ್ನಲಾಗಿದೆ.
ಕೆಲಸ ಬಿಟ್ಟು ಹೋದ ಬಳಿಕ ಜನವರಿ 20ರಂದು ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಮನಗಂಡು ಮನೆಯ ಬಾಗಿಲನ್ನು ಮುರಿದು ಒಳನುಗ್ಗಿ ವಜ್ರದ ಕರಿಮಣಿಸರ, ನಾಲ್ಕು ಚಿನ್ನದ ಬಳೆಗಳು, ಒಂದು ಚಿನ್ನದ ಸರ ಮತ್ತು 36 ಸಾವಿರ ರೂಪಾಯಿ ನಗದು ಸಹಿತ 3 ಲಕ್ಷದ 56,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಕುಂದಾಪುರ ಗ್ರಾಮಾಂತರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿ ಸೊತ್ತು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.