ಕಾಸರಗೋಡು,ಜ 23(MSP): ಲೋಕಸಭಾ ಚುನಾವಣೆಗೂ ಮುನ್ನ ಕೇರಳ, ಕರ್ನಾಟಕ ಹಾಗೂ ದಕ್ಷಿಣ ಭಾರತದಲ್ಲಿ ದಾಳಿ ನಡೆಸಿ ಆರೆಸ್ಸೆಸ್ ಮುಖಂಡರನ್ನು ಹತ್ಯೆಗೈಯ್ಯುವುದು ಬಂಧಿತ ಕಾಸರಗೋಡು ಡಾನ್ ತಸ್ಲೀಂ ಹಾಗೂ ತಂಡದ ಯೋಜನೆಯಾಗಿದ್ದು, ಇದಕ್ಕಾಗಿ ಪಾಕಿಸ್ತಾನದ ಐಸಿಸ್ ಭಯೋತ್ಪಾದಕ ಸಂಘಟನೆಯಿಂದ ಎರಡು ಕೋಟಿ.ರೂ ಗುತ್ತಿಗೆ ಪಡೆದಿರುವ ಬಗ್ಗೆ ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ.
ದಿಲ್ಲಿ ಪೊಲೀಸರಿಂದ ಬಂದಿತನಾಗಿರುವ ಕಾಸರಗೋಡು ಚೆಮ್ನಾಡು ಚೆಂಬರಿಕೆ ನಿವಾಸಿ ಮಹತಸಿಂ ಯಾನೆ ತಸ್ಲೀಂ ಹಾಗೂ ಇನ್ನಿಬ್ಬರನ್ನು ವಿಚಾರಣೆಗೊಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಕಲ್ಲಡ್ಕದ ಡಾ|ಪ್ರಭಾಕರ್ ಭಟ್ ಸಹಿತ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ತಸ್ಲೀಂ ಜತೆ ಅಫ್ಘಾನಿಸ್ತಾನದ ಪ್ರಜೆ ವಾಲಿ ಮಹಮ್ಮದ್ ಫೈಸಿ ಹಾಗೂ ದೆಹಲಿ ನಿವಾಸಿ ಶೇಖ್ ರಿಯಾಸುದ್ದೀನ್ ನನ್ನು ದೆಹಲಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದು ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಎಲ್ಲಾ ವಿಚಾರದ ಜತೆಗೆ ಐಸಿಸ್ ನಂಟು ಹೊಂದಿರುವುದು ಬಹಿರಂಗವಾಗಿದೆ.
ಲೋಕಸಭೆಯ ಚುನಾವಣೆಗೂ ಮುನ್ನ ಆರೆಸ್ಸೆಸ್ ಮುಖಂಡರ ಹತ್ಯೆ ಮಾಡುವುದು ಈ ತಂಡದ ಪ್ಲಾನ್ ಆಗಿದ್ದು ಇದಲ್ಲದೇ, ಗಣರಾಜ್ಯ ದಿನಾಚರಣೆಗೆಗೂ ಮೊದಲೇ ಕೆಲವೆಡೆ ಗಲಭೆಗೂ ಸಂಚು ರೂಪಿಸುವುದು ಈ ತಂಡ ಮುಖ್ಯ ಗುರಿಯಾಗಿತ್ತು.