ತುಮಕೂರು, 23(SS): ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕಯೋಗಿ ಸಿದ್ಧಗಂಗಾ ಮಠಾಧೀಶ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದು, ಮಠದಲ್ಲಿ ನೀರವ ಮೌನ ಆವರಿಸಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(111) ಸೋಮವಾರ ನಿಧನರಾಗಿದ್ದಾರೆ. ನಡೆದಾಡುವ ದೇವರು ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದೆ. ಜಗತ್ತಿಗೆ ಅನ್ನದಾಸೋಹ, ಜ್ಞಾನ ದಾಸೋಹದಿಂದ ಬೆಳಕನ್ನು ಚೆಲ್ಲಿದ್ದ ದಿವ್ಯ ಚೇತನ ಅಗಲಿಕೆಯಿಂದ ಇಡೀ ಕಲ್ಪತರುನಾಡು ಬಡವಾಗಿದೆ.
ಸದಾ ಹಸನ್ಮುಖಿಯಾಗಿ ಮಠಕ್ಕೆ ಹೋದವರನ್ನು ಯಾವುದೇ ಜಾತಿ, ಭೇದ ಎಣಿಸದೆ ಹರಸಿ ಪ್ರಸಾದ ನೀಡುತ್ತಿದ್ದ ಶ್ರೀಗಳು ಇನ್ನಿಲ್ಲದಿರುವುದನ್ನು ಊಹಿಸಿಕೊಳ್ಳಲು ಅಸಾಧ್ಯವಾಗಿದೆ. ತಮ್ಮ ಕಾಯಕ ನಿಷ್ಠೆಯಿಂದ ರಾಷ್ಟ್ರಮಟ್ಟದಲ್ಲಿ ತುಮಕೂರನ್ನು ಗುರುತಿಸುವಂತೆ ಮಾಡಿದ್ದ ಶ್ರೀಗಳು ಶಿವನೆಡೆಗೆ ಸಾಗಿರುವುದು ಮಠದ ಮಕ್ಕಳು ಮತ್ತು ಭಕ್ತಸಂಕುಲದಲ್ಲಿ ಇನ್ನಿಲ್ಲದ ಆತಂಕ ಸೃಷ್ಠಿಸಿದೆ.
ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿದ್ದು, ದೇಶಕ್ಕೆ ತುಂಬಲಾರದ ನಷ್ಟವಾಗಿದೆ.