ಮಂಗಳೂರು ಅ 25: ಜೋಕಟ್ಟೆಯ ಅಂಗನವಾಡಿ ಕೇಂದ್ರದ ಪುಟಾಣಿಗಳ ಆಟ ವಿಷಕಾರಿ ಸಲ್ಫರ್ ಬೂದಿಯೊಂದಿಗೆ .ಕಾರಣ ಇವರ ಭವಿಷ್ಯವಂತು ಕೋಕ್ ಬೂದಿಯಿಂದ ಮುಚ್ಚಿ ಹೋಗುವ ಲಕ್ಷಣಗಳು ಗೋಚರಿಸುತ್ತಿವೆ. ಅದೇ ವಿಷಯುಕ್ತ ಬೂದಿಯೊಂದಿಗೆ ಜೋಕಟ್ಟೆಯ ಅಂಗನವಾಡಿ ಪುಟಾಣಿಗಳಿಗೆ ಆಟ ಜತೆಗೆ ಊಟವೂ ಕೂಡಾ. ಎಂಆರ್ಪಿಎಲ್ ನಿಂದ ಹಾರುತ್ತಿರುವ ಕೆಮಿಕಲ್ ಬೂದಿ ಗ್ರಾಮ ತುಂಬಾ ತುಂಬಿಕೊಂಡಿದೆ. ಮುಂಜಾನೆಯ ಮಂಜಿನಂತೆ, ಹಾರು ಬೂದಿಯಿಂದ ಗ್ರಾಮವೇ ಮಂಜಾದಂತೆ ಕಾಣುತ್ತಿದೆ. ಆದರೆ ಕಂಪನಿಯ ವಿರುದ್ದ ನಡೆದ ಹೋರಾಟಗಳು ಅರಣ್ಯ ರೋದನವಾಗುತ್ತಿದೆ ಎನ್ನುತ್ತಾರೆ ಡಿವೈಎಫ್ ಮುಖಂಡ ಮುನೀರ್ ಕಾಟಿಪಳ್ಳ್
ಎಂಆರ್ಪಿಎಲ್ ಕಂಪನಿ ಡಪಿಂಗ್ ಯಾರ್ಡ್ ಸ್ಥಳಾಂತರಿಸಬೇಕೆಂಬ ಸ್ಥಳೀಯರ ಕೂಗಿನ ನಡುವೆಯೇ ಈ ಕೋಕ್ ಬೂದಿಯ ಹಾರಾಟ ಕೂಡಾ ಜೋರಾಗಿದೆ. ಎಂಆರ್ಪಿಎಲ್ ಕಂಪನಿಯ ಸಲ್ಫರ್, ಕೋಕ್ ಘಟಕಗಳನ್ನು ಸ್ಥಳಾಂತರಿಸಲು ಜೋಕಟ್ಟೆ ನಾಗರಿಕರ ಹೋರಾಟ ಸಮಿತಿ ಹೋರಾಟ ನಡೆಸುತ್ತಲೇ ಬಂದಿದೆ. ಸರ್ಕಾರ ಕೂಡಾ 2017 ಜೂನ್ 30 ರ ಒಳಗೆ ಶಿಫ್ಟ್ ಮಾಡಲು ಅಂತಿಮ ಗಡುವು ವಿಧಿಸಿತ್ತು. ಆದರೆ ಎಂಆರ್ಪಿಎಲ್ ಇದ್ಯಾವುದಕ್ಕೆ ಕ್ಯಾರೆ ಅನ್ನುತ್ತಿಲ್ಲ ಎನ್ನುವ ಕೂಗೂ ಗ್ರಾಮಸ್ಥರಿಂದ ಕೇಳಿಬರುತ್ತಿದೆ. ಈ ಹಾರುವ ಬೂದಿ ಕಾಟಕ್ಕೆ ಈಗಾಗಲೇ ಇಲ್ಲಿನ ಜನತೆ ತಲೆ ಸುತ್ತು, ವಾಕರಿಕೆ, ಚರ್ಮ ಸಂಬಂಧಿ, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ನಡುವೆ ಮಕ್ಕಳು ಸಲ್ಪರ್ ಬೂದಿ ಜತೆಯಲ್ಲಿ ಆಡುತ್ತಿರುವ ದೃಶ್ಯ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.