ಬೆಂಗಳೂರು,ಜ 23(MSP): ಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗ್ತಿದ್ದಂತೆ ಎಂಎಲ್ಎ ಕಂಪ್ಲಿ ಗಣೇಶ್ಗೆ ಬಂಧನದ ಭೀತಿ ಪ್ರಾರಂಭವಾಗಿದೆ. ಯಾವುದೇ ಸಂದರ್ಭದಲ್ಲಾದರೂ ಶಾಸಕ ಕಂಪ್ಲಿ ಗಣೇಶ್ ಅರೆಸ್ಟ್ ಆಗುವ ಸಾಧ್ಯತೆ ಇದೆ. ಇವರ ಬಂಧನಕ್ಕಾಗಿಯೇ ರಾಮನಗರ ಪೊಲೀಸರು ಮೂರು ತಂಡ ರಚಿಸಿದ್ದಾರೆ.
ಇನ್ನು ಇವರು ಇತ್ತೀಚೆಗೆ ತಾನೆ ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ಆನಂದ್ ಸಿಂಗ್ ಜೊತೆ ಕ್ಯಾತೆ ತೆಗೆದು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಾಸಕರ ಗಲಾಟೆ ಪ್ರಕರಣದ ಏ-1 ಆರೋಪಿ ಆಗಿರುವ ಕಂಪ್ಲಿ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 323, 324, 307, 504 ಹಾಗೂ 506 ಅಡಿಯಲ್ಲಿ ದೂರು ದಾಖಲಾಗಿದೆ.
ರೆಸಾರ್ಟ್ ನಲ್ಲಿ ಬಡಿದಾಟದ ಹಿನ್ನಲೆಯಲ್ಲಿ ತಮ್ಮ ವಿರುದ್ದ ಕೊಲೆಯತ್ನ ಪ್ರಕರಣ ದಾಖಲಾಗುತ್ತಿದ್ದಂತೆ ಶಾಸಕ ಗಣೇಶ್ ನಾಪತ್ತೆಯಾಗಿದ್ದಾರೆ. ರೆಸಾರ್ಟ್ ನಿಂದ ಸೋಮವಾರ ಹೊರಟ ಶಾಸಕರು ತಮ್ಮ ಕ್ಷೇತ್ರಕ್ಕೂ ಹೋಗಿಲ್ಲ.. ಅವರ ಪತ್ತೆಗಾಗಿ ರಾಮನಗರ ಪೊಲೀಸ್ ವರಿಷ್ಟಾಧಿಕಾರಿ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದ್ದು,ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಆರೋಪಿಯ ಚಲನವಲಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಎಸ್ಪಿ ರಮೇಶ್ ಮಾಹಿತಿ ನೀಡಿದ್ದಾರೆ.