ಮಲಪ್ಪುರಂ,ಜ 23(MSP): ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿ ಸುದ್ದಿಯಾಗಿದ್ದ ಕನಕದುರ್ಗಾ ಅವರನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ತಿಳಿದುಬಂದಿದೆ.
ದೇಗುಲ ಪ್ರವೇಶಿಸಿ ಅಜ್ಞಾತವಾಗಿದ್ದ ಕನಕದುರ್ಗಾ ಕೆಲದಿನಗಳ ಬಳಿಕ ಮನೆಗೆ ಹಿಂತಿರುಗಿದ್ದರು. ಈ ಸಂದರ್ಭ ಅತ್ತೆಯೇ ಕನಕದುರ್ಗಾ ಮೇಲೆ ಹಲ್ಲೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ನಂತರ ಹಲ್ಲೆಗೊಳಗಾದ ಕನಕದುರ್ಗಾ ಆಸ್ಪತ್ರೆಗೆ ದಾಖಲಾಗಿ ಮತ್ತೊಮ್ಮೆ ಸುದ್ದಿಯಾಗಿದ್ದರು. ಆದರೆ ಶಬರಿ ದೇಗುಲ ಪ್ರವೇಶಿಸಿದ್ದಕ್ಕಾಗಿ ಮನೆಯವರಿಂದಲೇ ತಿರಸ್ಕೃತಗೊಂಡಿರುವ ಕನಕದುರ್ಗಾ ಅವರನ್ನು ಮನೆಯಿಂದ ಹೊರಕ್ಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಅವರು ಪೆರಿಂತಲ್ಮನ್ನದಲ್ಲಿ ಸರ್ಕಾರ ನಡೆಸುತ್ತಿರುವ ಆಶ್ರಯ ಮನೆಯಲ್ಲಿ ಅವರು ಆಶ್ರಯ ಪಡೆದುಕೊಂಡಿದ್ದಾರೆ. ಗಂಡನ ಮನೆಯಿಂದ ಹೊರಹಾಕಲ್ಪಟ್ಟ ಕನಕದುರ್ಗಗೆ ತವರು ಮನೆಯಲ್ಲೂ ಆಶ್ರಯ ಸಿಕ್ಕಿಲ್ಲ. ಅಣ್ಣ ಭರತ್ ಕೂಡಾ ತನ್ನ ಮನೆಗೆ ಕಾಲಿಡದಂತೆ ಎಚ್ಚರಿಕೆ ನೀಡಿದ್ದಾನೆ. ತಂಗಿ ತನ್ನ ಮನೆಗೆ ಬರಬೇಕು ಎಂದಾದರೆ ಅಯ್ಯಪ್ಪ ಸ್ವಾಮಿಯ ಭಕ್ತ ಸಮೂಹದಲ್ಲಿ ಕ್ಷಮೆಯಾಚಿಸಬೇಕು ಎಂದು ಭರತ್ ಆಗ್ರಹಿಸಿದ್ದಾರೆ.
ಕನಕದುರ್ಗಗೆ ಅವರ ಭದ್ರತೆಗಾಗಿ ಸುಮಾರು 10 ಕ್ಕೂ ಹೆಚ್ಚು ಮಂದಿ ಪೊಲೀಸರ ತಂಡ ನಿಯೋಜನೆಯಾಗಿದೆ ಎಂದು ಪೆರಿಂತಲ್ಮನ್ನ ಸರ್ಕಲ್ ಇನ್ಸ್ ಪೆಕ್ಟರ್ ಟಿ ಎಸ್ ಬಿನು ತಿಳಿಸಿದ್ದಾರೆ.