ಮೂಡುಬಿದಿರೆ,ಜ 25(MSP): ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯಾ ಆರೋಪಿಗಳಲ್ಲೊಬ್ಬರಾದ ಗಂಟಾಲ್ಕಟ್ಟೆಯ ಹೋಟೆಲ್ ವ್ಯಾಪಾರಿ ಇಮ್ತಿಯಾಜ್ನ ಕೊಲೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಜರಂಗದಳ ಮುಖಂಡ, ಬೆಳುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮನಾಥ ಕೋಟ್ಯಾನ್ರನ್ನು ಮೂಡುಬಿದಿರೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಳಿಕ ಅವರನ್ನು ಮೂಡುಬಿದಿರೆ ಕೋರ್ಟ್ಗೆ ಹಾಜರುಪಡಿಸಿದಾಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಒಬ್ಬರಾದ ಇಮ್ತಿಯಾಜ್ ಬಂಧನಕ್ಕೊಳಗಾಗಿ ಹಲವು ದಿನಗಳ ಬಳಿಕ ಕೋರ್ಟ್ನಿಂದ ಜಾಮೀನು ಪಡೆದುಕೊಂಡು ಹೊರಬಂದಿದ್ದರು. ನಂತರ ಗಂಟಾಲ್ಕಟ್ಟೆಯಲ್ಲಿ ಚಿಕ್ಕದೊಂದು ಹೋಟೇಲ್ ವ್ಯವಹಾರ ನಡೆಸುತ್ತಿದ್ದರು.
ಸೆಪ್ಟಂಬರ್ ೨೪ರಂದು ಬೆಳಿಗ್ಗೆ ಇನ್ನೋವಾ ಕಾರಿನಲ್ಲಿ ಬಂದ ಆರೋಪಿಗಳು ಚಾ ಕುಡಿಯುವ ನೆಪದಲ್ಲಿ ಹೋಟೇಲ್ ಪ್ರವೇಶಿಸಿ ಇಮ್ತಿಯಾಜ್ಗೆ ಮಾರಕಾಯುಧದಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ಆದರೆ ಇಮ್ತಿಯಾಜ್ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಪ್ರಕರಣದ ಆರೋಪಿಗಳನ್ನು ಕೆಲವು ದಿನಗಳ ಬಳಿಕ ಮಂಗಳೂರು ಪೊಲೀಸರು ಬಂಧಿಸಿದ್ದರು. ಬಜರಂಗದಳ ಮುಖಂಡ ಬೆಳುವಾಯಿಯ ಸೋಮನಾಥ ಕೋಟ್ಯಾನ್ ಈ ಪ್ರಕರಣದ ಸಂಚು ರೂಪಿಸಿದ್ದರೆನ್ನುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿತ್ತು. ಮೂಡುಬಿದಿರೆ ಪೊಲೀಸರು ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.