ಕೇರಳ, ಜ 25(MSP): ಸುಪ್ರೀಂಕೋರ್ಟ್ ಆದೇಶ ಎಂದು ಅಯ್ಯಪ್ಪ ಭಕ್ತರ ವಿರೋಧದ ನಡುವೆಯೂ ಶಬರಿಮಲೆ ಪ್ರವೇಶಿಸಿದ ಕನಕದುರ್ಗಾ, ಇದೀಗ ತನ್ನ ಗಂಡನಮನೆ ಪ್ರವೇಶಕ್ಕೂ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಶಬರಿಮಲೆ ಪ್ರವೇಶದ ಬಳಿಕ ಅಜ್ಞಾತವಾಗಿದ್ದ ಕನಕಾದುರ್ಗಾ ಕೆಲ ದಿನಗಳ ನಂತರ ಗಂಡನ ಮನೆಗೆ ಬಂದಾಗ ಆಕೆಯ ಅತ್ತೆಯೇ ಹಲ್ಲೆ ನಡೆಸಿದ್ದರು.
ಬಳಿಕ ಕುಟುಂಬಸ್ಥರು ಅವರಿಗೆ ಪ್ರವೇಶವನ್ನು ನಿರಾಕರಿಸಿದ್ದರು.. ಅತ್ತ ಕನಕದುರ್ಗಾಳ ಅಣ್ಣ ಭರತ್ ಕೂಡಾ ಅಯ್ಯಪ್ಪ ಭಕ್ತರಲ್ಲಿ ಕ್ಷಮೆ ಕೇಳಿದ ಬಳಿಕವಷ್ಟೇ ನಮ್ಮೊಂದಿಗೆ ಇರಬಹುದು ಎಂದು ಹೇಳಿದ್ದಾರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಿದ್ದಕ್ಕೆ ಯಾರಲ್ಲೂ ಕ್ಷಮೆ ಕೇಳಲಾರೆ. ಎಲ್ಲರನ್ನೂ ನ್ಯಾಯಾಲಯದಲ್ಲೇ ಎದುರಿಸುತ್ತೇನೆ ಎಂದು ಮನೆಯವರಿಂದಲೇ ಬಹಿಷ್ಕಾರಕ್ಕೆ ಒಳಗಾಗಿರುವ ಮಹಿಳೆ ಕನಕದುರ್ಗಾ ಹೇಳಿದ್ದಾರೆ.
ನಾನು ಮಾಡಿದ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದ ಕನಕದುರ್ಗಾ, ಮಾತಿನ ಅಥವಾ ನಡೆಯ ಮೂಲಕ ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಹೀಗಾಗಿ ಕ್ಷಮೆ ಕೇಳಲಾರೆ. ನಾನು ಮನೆಯೊಳಕ್ಕೆ ಪ್ರವೇಶಿಸುವುದನ್ನು ತಡೆಯುವ ಹಕ್ಕು ನನ್ನ ಸಹೋದರ, ಪತಿ ಕೃಷ್ಣನುಣ್ಣಿ ಸೇರಿದಂತೆ ಯಾರಿಗೂ ಇಲ್ಲ .ನಾನು ನ್ಯಾಯಾಲಯದ ಆದೇಶದೊಂದಿಗೆ ಮನೆಯೊಳಕ್ಕೆ ಪ್ರವೇಶಿಸಲಿದ್ದೇನೆ. ಅಲ್ಲಿಯವರೆಗೆ ಒನ್ ಸ್ಟಾಪ್ ಸೆಂಟರ್ ಕೇಂದ್ರದಲ್ಲಿ ಉಳಿದುಕೊಳ್ಳಲ್ಲಿದ್ದೇನೆ ಎಂದಿದ್ದಾರೆ.