ಉಡುಪಿ, ಜ 25(SM): ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟು ಸಹಿತ ನಾಪತ್ತೆಯಾದ ಏಳು ಮಂದಿ ಮೀನುಗಾರರ ಪತ್ತೆಗೆ ಸಂಬಂಧಿಸಿದಂತೆ ಮಲ್ಪೆ ಮೀನುಗಾರ ಮುಖಂಡರು ಶುಕ್ರವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಬಜೆಟ್ನ ಪೂರ್ವಭಾವಿಯಾಗಿ ಮೀನುಗಾರಿಕಾ ಸಮಸ್ಯೆ ಮತ್ತು ಸವಲತ್ತಿನ ಬಗ್ಗೆ ವಿಶೇಷ ಸಭೆಯಲ್ಲಿ ಭಾಗವಹಿಸಿದ್ದ ಮೀನುಗಾರರು ಬಳಿಕ ಮುಖ್ಯಮಂತ್ರಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ. ಮುಖ್ಯಮಂತ್ರಿಗಳು ಮೀನುಗಾರರೊಂದಿಗೆ ಮಾತನಾಡುತ್ತ, ಕಾರ್ಯಾಚರಣೆಗೆ ಸಂಬಂಧಿಸಿ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ರಾಜ್ಯ ಸರ್ಕಾರ ಮೀನುಗಾರರ ಜತೆ ಇದೆ ಎಂಬ ಭರವಸೆ ನೀಡಿದ್ದಾರೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೊಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಕಾರ್ಯದರ್ಶಿ ಗೋಪಾಲ ಆರ್.ಕೆ, ಮಂಗಳೂರು ಟ್ರಾಲ್ ಬೋಟ್ ಮೀನುಗಾರ ಸಂಘದ ಪ್ರದಾನ ಕಾರ್ಯದರ್ಶಿ ರಾಜೇಶ್ ಪುತ್ರನ್ ಉಳ್ಳಾಲ ನಿಯೋಗದಲ್ಲಿದ್ದರು.