ಶಿರ್ವ, ಜ 26(SM): ಇಲ್ಲಿನ ಮೂಡುಬೆಳ್ಳೆ ಗ್ರಾಮದ ಎಡ್ಮೇರು ತಾಕಡಬೈಲು ಕಾಡಿನಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿ ಮರಕ್ಕೆ ನೇತುಹಾಕಿದ ಘಟನೆ ನಡೆದಿದೆ. ಆ್ಯಂಡ್ರೂ ಮರ್ಟಿಸ್ (60) ಹತ್ಯೆಗೊಳಗಾದ ವ್ಯಕ್ತಿ.
ಕೈ ಕಾಲು ಕಟ್ಟಿ ಕುತ್ತಿಗೆಯನ್ನು ಬಿಗಿದು ಆರೋಪಿಗಳು ಕೊಲೆ ಮಾಡಿದ್ದು, ಘಟನೆ ನಡೆದು 2 ತಾಸಿನಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕೂಲಿ ಕೆಲಸ ಮಾಡುತ್ತಿದ್ದ ಮಾರ್ಟಿನ್ ಅವರು ವಿಪರೀತ ಕುಡಿತ ಚಟ ಹೊಂದಿದ್ದರು. ಇದರಿಂದ ನೊಂದ ಹೆಂಡತಿ ವಿದೇಶಕ್ಕೆ ಹೋದರೆ ಮೂರು ಜನ ಮಕ್ಕಳು ಅವರೊಂದಿಗೆ ಇರಲಿಲ್ಲ.
ಶುಕ್ರವಾರ ಬೆಳಿಗ್ಗೆ ಮಾರ್ಟಿನ್ ಉಡುಪಿಗೆ ಹೋಗುತ್ತಿದ್ದುದನ್ನು ತಂಗಿ ಜೆಸ್ಸಿ ಸಲ್ಡಾನ ನೋಡಿದ್ದಾರೆ. ಮಧ್ಯಾಹ್ನ ಕಾಡಿಗೆ ತೆರಳಿದ್ದ ಸ್ಥಳೀಯರು ಘಟನೆಯ ಕುರಿತಂತೆ ಮನೆಯವರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಘಟನೆ ನಡೆದ ಒಂದೆರಡು ತಾಸಿನಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳು ಪೆರ್ಣಂಕಿಲದ ರಾಜೇಂದ್ರ ನಾಯಕ್ ಮತ್ತು ಕಟ್ಟಿಂಗೇರಿ ಹಂಗಾರಕಟ್ಟೆಯ ನಿವಾಸಿ ಸಂತೋಷ್ ಎಂದು ತಿಳಿದು ಬಂದಿದ್ದು, ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಹತ್ಯೆಗೈಯಲು ಪ್ರಮುಖ ಕಾರಣ ಏನೆಂದು ತಿಳಿದು ಬಂದಿಲ್ಲ.