ನವದೆಹಲಿ, ಜ26(SS): ರಾಷ್ಟ್ರದ ಅತಿದೊಡ್ಡ ಗೌರವ ಭಾರತ ರತ್ನ ಪ್ರಶಸ್ತಿಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಾಮಾಜಿಕ ಹೋರಾಟಗಾರ ನಾನಾಜಿ ದೇಶ್ಮುಖ್, ಸಂಗೀತ ಸಾಧಕ ಭೂಪೇನ್ ಹಜಾರಿಕಾ ಭಾಜನರಾಗಿದ್ದಾರೆ.
ನಾನಾಜಿ ಮತ್ತು ಭೂಪೇನ್ ಅವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ. ಹೀಗಾಗಿ ಜನವರಿ 21ರಂದು ಲಿಂಗೈಕ್ಯರಾದ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಈ ಬಾರಿಯಾದರೂ ಭಾರತ ರತ್ನ ಸಿಗಬಹುದೆಂಬ ಕರ್ನಾಟಕದಕೋಟ್ಯಂತರಮಂದಿಯ ನಿರೀಕ್ಷೆ ಹುಸಿಯಾಗಿದೆ. ಶತಾಯುಷಿ, ತ್ರಿವಿಧದಾಸೋಹಿಸಿದ್ದಗಂಗಾಶ್ರೀಗಳಿಗೆಈಬಾರಿ ಭಾರತರತ್ನ ಸಿಗಬಹುದು ಎಂದು ಕರುನಾಡಿನ ಜನ ಭಾವಿಸಿದ್ದರು.
ಶ್ರೀಗಳ ಆರೋಗ್ಯ ಹದಗೆಟ್ಟ ದಿನದಿಂದ ಅವರಿಗೆ ಭಾರತ ರತ್ನ ನೀಡಬೇಕು ಎಂಬ ಕೂಗು ಬಲವಾಗಿ ಕೇಳಿಬಂದಿತ್ತು. ದಶಕಗಳ ಕಾಲ ಶ್ರೀಗಳು ನಡೆಸಿದ ನಿಸ್ವಾರ್ಥ ಸೇವೆಗೆ ಭಾರತ ರತ್ನ ನೀಡಬೇಕು ಎಂದು ಕೇಂದ್ರವನ್ನು ಒತ್ತಾಯಿಸಲಾಗಿತ್ತು. ಆದರೆ ಕೊನೆಗೂ ಶ್ರೀಗಳನ್ನು ಕೈಬಿಡಲಾಗಿದೆ.
ಇನ್ನು ಈ ವಿಚಾರ ಇದೀಗ ರಾಜಕೀಯ ಪಕ್ಷಗಳಿಗೆ ಪರಸ್ಪರ ಗುದ್ದಾಟಕ್ಕೆ ವೇದಿಕೆಯಾಗಿದೆ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡದಿರುವುದಕ್ಕೆ ಕರ್ನಾಟಕ ಕಾಂಗ್ರೆಸ್ ಅಸಮಧಾನ ವ್ಯಕ್ತಪಡಿಸಿದೆ. ಇನ್ನೊಂದೆಡೆ ರಾಜ್ಯ ಸರಕಾರ ಕೇಂದ್ರವನ್ನು ಮನವರಿಕೆ ಮಾಡಲು ವಿಫಲವಾಗಿದೆ ಎನ್ನುವ ಆರೋಪಗಳು ಕೂಡ ವ್ಯಕ್ತವಾಗುತ್ತಿದೆ. ಆದರೆ, ನಿಸ್ವಾರ್ಥ ಸೇವೆ ಸಲ್ಲಿಸಿ ಜೀವನ ನಡೆಸಿದ ಶ್ರೀಗಳಿಗೆ ಪ್ರಶಸ್ತಿ ನೀಡದಿರುವುದು ಮಾತ್ರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.