ಸುಬ್ರಹ್ಮಣ್ಯ ಅ 25: ಪ್ರಸಿದ್ದ ನಾಗಾರಾಧನೆಯ ತಾಣ ಕುಕ್ಕೆ ಸುಬ್ರಹ್ಮಣ್ಯದ ಮಹಾತೋಬಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವಕ್ಕೆ ಈ ಹಿಂದಿನಂತೆ ಮಲೆಕುಡಿಯ ಜನಾಂಗವು ಸೇವೆ ನೆರವೇರಿಸುವ ಮೂಲಕ ಶ್ರೀ ದೇವರ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲು ಸಕಲ ರೀತಿಯ ಸೇವೆಯನ್ನು ಮಾಡಲಿದೆ.ಈ ಹಿಂದೆ ಪತ್ರಿಕೆಯಲ್ಲಿ ಮತ್ತು ಮಾದ್ಯಮಗಳಲ್ಲಿ ರಾಜ್ಯ ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕುಕ್ಕೆ ದೇವಳದಲ್ಲಿ ಮಡೆಮಡೆಸ್ನಾನಕ್ಕೆ ಅವಕಾಶ ನೀಡದೆ ಹೋದಲ್ಲಿ ಈ ಬಾರಿಯ ವಾರ್ಷಿಕ ಚಂಪಾಷಷ್ಠಿಯ ಪೂರ್ವ ತಯಾರಿ, ಬ್ರಹ್ಮರಥೋತ್ಸವ, ಪಂಚಪರ್ವ ಉತ್ಸವಾದಿಗಳಲ್ಲಿ ಸ್ಥಳಿಯ ಮಲೆಕುಡಿಯ ಜನಾಂಗದವರು ಯಾವುದೇ ನಿರ್ದಾರ ತೆಗೆದುಕೊಳ್ಳದೆ ತಟಸ್ಥ ನಿಲುವು ತೆಗೆದುಕೊಳ್ಳುವುದಾಗಿ ಹೇಳಿರುವುದು ಅದು ಅವರ ಸ್ವಯಂ ಘೋಷಣೆಯಾಗಿದೆ.ಅವರ ಹೇಳಿಕೆಗೆ ಸುಳ್ಯ ತಾಲೂಕು ಮಲೆಕುಡಿಯ ಸಂಘದ ಬೆಂಬಲವಿಲ್ಲ ಎಂದು ಸುಳ್ಯ ತಾಲೂಕು ಮಲೆಕುಡಿಯ ಸಂಘದ ಅಧ್ಯಕ್ಷ ಪುಟ್ಟಣ್ಣ ವಲಿಕಜೆ ಹೇಳಿದರು.
ಸುಬ್ರಹ್ಮಣ್ಯದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು. ನಾವುಗಳು ಪರಂಪರಾಗತವಾಗಿ ಶ್ರೀ ದೇವಳದಲ್ಲಿ ನಡೆಸುತ್ತಾ ಬಂದ ರಥ ಕಟ್ಟುವ ಕೆಲಸ, ಉತ್ಸವದ ಸಂದರ್ಭ ದೀವಟಿಗೆ ಹಿಡಿಯುವುದು, ತಳಿರು ತೋರಣ ಕಟ್ಟುವುದು ಮತ್ತು ಪಂಚಪರ್ವ ಉತ್ಸವಾಧಿಗಳಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇವೆ.ನಮ್ಮನ್ನು ಯಾರೂ ಸಂಪರ್ಕಿಸದೆ ಸ್ವಯಂಘೋಷಿಸಿಕೊಂಡ ಯಾವುದೇ ಅಧ್ಯಕ್ಷರ ಹೇಳಿಕೆಗಳಿಗೆ ನಮ್ಮ ಬೆಂಬಲವಿಲ್ಲ. ಭಾಸ್ಕರ ಬೆಂಡೋಡಿ ಘೋಷಣೆ ಮಾಡಿರುವ ಸಂಘಟನೆ ಅದು ಅದಿಕೃತವಲ್ಲ ಜನರಿಂದ ಆಯ್ಕೆಯಾದ ತಾಲೂಕು ಮಲೆ ಕುಡಿಯರ ಸಂಘವೇ ಅಧಿಕೃತ ಸಂಘಟನೆಯಾಗಿದೆ. ಸ್ವ ಹಿತಾಸಕ್ತಿಗಾಗಿ ನಮ್ಮವರ ಹೆಸರು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುವ ಬೆಂಡೋಡಿ ಹೇಳಿಕೆಗೆ ಯಾರೂ ಕೂಡಾ ಬೆಲೆ ಕೊಡಬೇಕಾಗಿಲ್ಲ.ಇವರು ಮಲೆಕುಡಿಯರ ಪ್ರಭಾವಿ ನಾಯಕರೆಂದು ಬಿಂಬಿಸುತ್ತಿರುವುದು ಸತ್ಯಕ್ಕೆ ದೂರವಾಗಿದೆ.ಇವರು ಮಲೆ ಕುಡಿಯರ ಸಂಘದ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಸಮಿತಿಗಳಲ್ಲಿ ಸಕ್ರೀಯರಾಗಿಲ್ಲ.ಸಂಘದ ನಿಯಮಗಳ ವಿರುದ್ದ ಮುಂದಿನ ದಿನಗಳಲ್ಲಿ ಹೇಳಿಕೆ ನೀಡಿದ್ದಲ್ಲಿ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಡೆಸ್ನಾನದ ವಿಚಾರವು ಈಗಾಗಲೇ ನ್ಯಾಯಾಲಯದಲ್ಲಿದ್ದು ನ್ಯಾಯಾಲಯದ ತೀರ್ಪಿಗೆ ನಾವು ಗೌರವಿಸುತ್ತೇವೆ.ಮಡೆಸ್ನಾನದ ವಿಚಾರದಲ್ಲಿ ಮಲೆ ಕುಡಿಯ ಸಮುದಾಯವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುವುದು ಸರಿಯಲ್ಲ.ಮಡೆಸ್ನಾನ ಮಲೆಕುಡಿಯರ ಸಂಪ್ರದಾಯಿಕ ಆಚರಣೆಗಳಲ್ಲಿ ಬರುವುದಿಲ್ಲ.ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಜಾತ್ರೆ ಹಾಗೂ ಇನ್ನಿತರ ಉತ್ಸವಾಧಿಗಳಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ಮೂಲ ಜನಾಂಗವಾದ ಮಲೆಕುಡಿಯರಿಗೆ ಉದ್ಯೋಗದ ಭದ್ರತೆ, ಮುಂಬಡ್ತಿ, ದಿನಕೂಲಿ ನೌಕರರನ್ನು ಖಾಯಂ ಮಾಡುವುದು ಹಾಗೂ ಮಲೆಕುಡಿಯ ಕುಟುಂಬದ ಅಭಿವೃದ್ಧಿಗಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸಹಾಯ ಮಾಡುವುದನ್ನು ಬಿಟ್ಟು ಸ್ವ ಹಿತಾಸಕ್ತಿಗಾಗಿ ನಮ್ಮ ಸಮುದಾಯದ ಹೆಸರನ್ನು ಅನಾವಶ್ಯಕವಾಗಿ ಬಲಿಪಶು ಮಾಡುವುದನ್ನು ಸುಳ್ಯ ತಾಲೂಕು ಮಲೆ ಕುಡಿಯರ ಸಂಘ ಉಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.