ರಾಮನಗರ, ಜ26(SS): ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ವೀರಾಪುರ ಗ್ರಾಮವನ್ನು ದತ್ತು ಪಡೆಯುತ್ತೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಶಿವಕುಮಾರ ಸ್ವಾಮೀಜಿಗಳ ಹುಟ್ಟೂರಾದ ವೀರಾಪುರವನ್ನ ದತ್ತು ಪಡೆಯುತ್ತೇವೆ. ಬಾಲಗಂಗಾಧರನಾಥ್ ಸ್ವಾಮೀಜಿ ಬಾಣಂದೂರು ಹಾಗೂ ವೀರಾಪುರ ಈ ಎರಡು ಗ್ರಾಮಗಳು ಮಹಾಪುರುಷರು ಜನ್ಮತಾಳಿದ ಗ್ರಾಮಗಳಾಗಿದೆ. ಈ ಎರಡೂ ಗ್ರಾಮಗಳ ಸಮಗ್ರ ಅಭಿವೃದ್ಧಿ ಮಾಡಲು ಚಿಂತನೆ ಮಾಡಲಾಗಿದೆ. ಈ ಹಿಂದೆ ಆ ಗ್ರಾಮದಲ್ಲಿ ಸಣ್ಣ ಪುಟ್ಟ ಅಭಿವೃದ್ಧಿಯಾಗಿತ್ತು. ನಮ್ಮ ರಾಜ್ಯಕ್ಕೆ ಎರಡು ಕಣ್ಣುಗಳಿದ್ದಂತೆ. ಹೀಗಾಗಿ ಮತ್ತೆ ಅದರ ಅಭಿವೃದ್ಧಿ ಮಾಡಲು ತೀರ್ಮಾನ ಮಾಡಿರುವುದಾಗಿ ತಿಳಿಸಿದರು.
ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ವಿಚಾರದ ಕುರಿತು ವಿಧಾನಸಭೆಯಲ್ಲಿ ನಿರ್ಣಯ ಮಾಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಘೋಷಣೆ ಮಾಡಿದ್ದಾರೆ. ಸಂಸದರು ಕೂಡ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು, ಅವರ ಮೇಲೆ ಒತ್ತಡ ತರಲಾಗುವುದು ಎಂದರು.