ಹೊಸದಿಲ್ಲಿ, ಜ276(SS): ಸುಪ್ರೀಂ ಕೋರ್ಟ್ ರಾಮ ಮಂದಿರ ವಿವಾದವನ್ನು ಇತ್ಯರ್ಥಪಡಿಸಲು ವಿಫಲವಾದರೆ, ಅದನ್ನು ನಮಗೆ ಒಪ್ಪಿಸಿ. 24 ಗಂಟೆಯೊಳಗೇ ನಾವು ವಿವಾದವನ್ನು ಬಗೆಹರಿಸುತ್ತೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಜನರು ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಮೊದಲು ಪ್ರಕರಣವನ್ನು ನ್ಯಾಯಾಲಯ ನಮ್ಮ ಕೈಗೆ ಒಪ್ಪಿಸಲಿ. ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಬೇಕೆಂದು ನ್ಯಾಯಾಲಯಕ್ಕೂ ನಾನು ಮನವಿ ಮಾಡುತ್ತೇನೆ. 2010ರ ಸೆ.30ರಂದು ಅಲಹಾಬಾದ್ ಹೈಕೋರ್ಟ್ನ ವಿಭಾಗೀಯ ಪೀಠ ತೀರ್ಪು ನೀಡಿರುವುದು ವಿವಾದಿತ ಭೂಮಿಯ ಹಂಚಿಕೆ ಮೇಲಲ್ಲ. ಬದಲಿಗೆ, ಹಿಂದೂ ದೇವಾಲಯ ಅಥವಾ ಸ್ಮಾರಕವನ್ನು ಕೆಡವಿ ಬಾಬ್ರಿ ಮಸೀದಿ ಕಟ್ಟಲಾಗಿದೆ ಎಂಬುದನ್ನು ಕೋರ್ಟ್ ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿದೆ ಎಂದು ಹೇಳಿದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸಲಾಗದು. ನಾವು ಈ ವಿಚಾರವನ್ನು ನ್ಯಾಯಾಲಯಕ್ಕೇ ಬಿಡುತ್ತೇವೆ. 1994ರಲ್ಲಿ ಆಗಿನ ಕೇಂದ್ರ ಸರಕಾರ ಸಲ್ಲಿಸಿದ್ದ ಅಫಿಡವಿಟ್ ಆಧರಿಸಿ ನ್ಯಾಯಾಲಯ ತೀರ್ಪು ನೀಡಿದ್ದರೆ, ದೇಶಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತಿತ್ತು. ಆದರೆ, ಅನಗತ್ಯ ವಿಳಂಬದಿಂದ ಜನರು ಸಹನೆ ಕಳೆದುಕೊಳ್ಳುತ್ತಿದ್ದಾರೆ,'' ಎಂದು ಅವರು ಹೇಳಿದ್ದಾರೆ.