ಮಂಗಳೂರು, ಜ27(SS): ಕುಡಿದ ಮತ್ತಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಅಡ್ಡಾದಿಡ್ಡಿ ಕಾರು ಚಲಾಯಿಸಿ ಸಮಸ್ಯೆ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆದಿದೆ.
ನಿವೃತ್ತ ಎಸ್ಪಿ ಮಿತ್ರ ಹೆರಾಜೆ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ನಿವೃತ್ತ ಪೊಲೀಸ್ ಅಧಿಕಾರಿ.
ಇವರು ಕಾರು ಚಲಾಯಿಸುತ್ತಾ ಕದ್ರಿಯಿಂದ ಕೆಪಿಟಿ ಕಡೆಗೆ ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ್ದು, ಹಲವು ವಾಹನಗಳಿಗೆ ಡಿಕ್ಕಿಯಾಗಿದೆ. ಮಾತ್ರವಲ್ಲ, ಈ ಘಟನೆಯಿಂದ ಸ್ಕೂಟರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಆಕ್ರೋಶಗೊಂಡ ಸಾರ್ವಜನಿಕರು ಕಾರಿಗೆ ಮುತ್ತಿಗೆ ಹಾಕಿದ್ದು, ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಾನು ನಿವೃತ್ತ ಎಸ್ಪಿ ಎನ್ನುತ್ತಿದ್ದಂತೆ ಜನ ಮತ್ತಷ್ಟು ಆಕ್ರೋಶಗೊಂಡಿದ್ದಾರೆ.
ಕದ್ರಿ ಮತ್ತು ಉರ್ವಾ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ಚದುರಿಸಲು ಲಘು ಲಾಠಿ ಬೀಸಿದ್ದಾರೆ. ಮಧ್ಯರಾತ್ರಿ 12 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಕದ್ರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.