ಉಡುಪಿ, ಜ 28 (MSP): ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಬೋಟ್ ಸಹಿತ 7 ಮೀನುಗಾರರು ಕಣ್ಮರೆಯಾಗಿ 43 ದಿನಗಳೇ ಕಳೆದಿದ್ದು, ಯಾವ ಸುಳಿವು ಲಭ್ಯವಾಗಿಲ್ಲ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಬೋಟ್ ಶ್ರೀಲಂಕಾದಲ್ಲಿ ಪತ್ತೆಯಾಗಿದ್ದು, ಬೊಬ್ಬರ್ಯ ದೈವ ಮಾತು ಉಳಿಸಿಕೊಂಡಿದೆ ಎನ್ನುವ ಸಂದೇಶವೊಂದು ಭಾರಿ ಸದ್ದು ಮಾಡಿದೆ.ಇದು ನಾಪತ್ತೆಯಾದ ಮೀನುಗಾರರ ಕುಟುಂಬಸ್ಥರು, ಪೊಲೀಸ್ ಇಲಾಖೆಗೆ ತಲೆನೋವು ತಂದಿದೆ. ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಈ ಬಗ್ಗೆ ಇಲಾಖೆ ಸುಳ್ಳು ವದಂತಿ ಎಂದು ಅಲ್ಲೆಗೆಳೆದಿದೆ.
ಶ್ರೀಲಂಕಾದಲ್ಲಿ ಬೋಟ್ ಇರುವ ಸಂದೇಶ ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾನುವಾರ ಸಂದೇಶದ ಪ್ರಭಾವ ತುಸು ಜೋರಾಗಿತ್ತು. ಅನೇಕರು ಇದನ್ನು ಸತ್ಯವೆಂದೇ ನಂಬಿದ್ದು, ಗ್ರೂಪ್ನಿಂದ ಗ್ರೂಪ್ಗೆ ಹರಿದಾಡಿ ದೈವ ತನ್ನ ಶಕ್ತಿ ತೋರಿಸಿಕೊಟ್ಟಿದೆ ಎನ್ನುವ ಹ್ಯಾಶ್ ಟ್ಯಾಗ್ ಸಂದೇಶ ಹರಿ ಬಿಟ್ಟಿದ್ದರು.ಈ ಸಂದೇಶ ಪೊಲೀಸ್ ಇಲಾಖೆಯಿಂದ ಹಿಡಿದು ಮೀನುಗಾರರಿಗೂ ತಲೆ ನೋವು ತಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಡುವವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದು ಶುದ್ಧ ಸುಳ್ಳು ಸುದ್ದಿ. ಇಂತಹ ಮಾಹಿತಿಯನ್ನು ಶೇರ್ ಮಾಡಿ ಮನೆಯವರ ಸುಳಿವು ಇಲ್ಲದೇ ನೊಂದಿದ್ದ ಕುಟುಂಬಸ್ಥರಿಗೆ ಮತ್ತಷ್ಟು ನೋವು ನೀಡಬೇಡಿ ಎಂದು ಕೆಲ ಮುಖಂಡರು ಮನವಿ ಮಾಡಿದ್ದಾರೆ.
ಕ್ರಮಕ್ಕೆ ಆಗ್ರಹ: ಸಾಮಾಜಿಕ ಜಾಲತಾಣಗಳಲ್ಲಿ ಕಾಣೆಯಾದವರು ಶ್ರೀಲಂಕಾದಲ್ಲಿ ಸಿಕ್ಕಿದ್ದಾರೆ ಎನ್ನುವ ಸುಳ್ಳು ಮಾಹಿತಿಯನ್ನು ಹರಿಯಬಿಟ್ಟಿದ್ದಾರೆ. ಈ ಮಾಹಿತಿಯನ್ನು ಪೊಲೀಸ್ ಇಲಾಖೆ ಮತ್ತು ಮೀನುಗಾರಿಕಾ ಸಂಬಂಧಿಸಿದ ಇಲಾಖೆಗಳು ಅಲ್ಲಗೆಳೆದಿವೆ. ಈ ಬಗ್ಗೆ ಇಲಾಖೆಗಳಿಗೆ ಯಾವುದೇ ಮಾಹಿತಿ ದೊರಕಿಲ್ಲ. ಇಂತಹ ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವವರ ವಿರುದ್ಧ ಸಂಬಂಧ ಪಟ್ಟವರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ. ಬೋಟ್ ಪತ್ತೆಯಾಗಿದೆ ಎನ್ನುವ ಅಸಂಬದ್ಧ ವಿಚಾರಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲ. ವಾಟ್ಸ್ ಆ್ಯಪ್ ಬಂದಿರುವುದು ಸುಳ್ಳು ಮಾಹಿತಿ. ವದಂತಿ ಹಬ್ಬಿಸಿ ಗೊಂದಲ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬೊಬ್ಬರ್ಯ ನುಡಿಕೊಟ್ಟಿದ್ದು ಉತ್ತರ ದಿಕ್ಕು: ಮೀನುಗಾರರ ನಾಪತ್ತೆ ಬಳಿಕ ಮಲ್ಪೆಯಲ್ಲಿ ನಡೆದ ಬೊಬ್ಬರ್ಯ ದರ್ಶನದಲ್ಲಿ ತುಳು ಭಾಷೆಯಲ್ಲಿ ಬೋಟ್ನ ಕುರುಹು ಬಡಕಾಯಿ (ಬಡಗು ದಿಕ್ಕು/ಉತ್ತರ ದಿಕ್ಕು)ನಲ್ಲಿದೆ ಎಂದು ದೇವರು ನುಡಿ ಕೊಟ್ಟಿತ್ತು. ಸದ್ಯ ಬೋಟ್ ಸಿಕ್ಕಿದೆ ಎಂದು ಹರಿದಾಡುತ್ತಿರುವ ಸುದ್ದಿ ಶ್ರೀಲಂಕಾ ಆಗಿದೆ. ಶ್ರೀಲಂಕಾ ಇರುವುದು ದಕ್ಷಿಣ ಭಾಗದಲ್ಲಿ ಎನ್ನುವ ಟ್ಯಾಗ್ಗಳು ಬಂದಿವೆ.
ಸಿಂಟೆಕ್ಸ್ ಪತ್ತೆ
ಉತ್ತರ ಕನ್ನಡ ಜಿಲ್ಲೆಯ ಬೇಲಿಕೆರೆ ಬಂದರಿನಲ್ಲಿ ನೀರು ಸಂಗ್ರಹದ ಸಿಂಟೆಕ್ಸ್ ಪತ್ತೆಯಾಗಿದ್ದು, ಬೋಟ್ನ ಕಾರ್ಮಿಕ ಪಾಳಿ ರಜೆಯಲ್ಲಿದ್ದ ಜೋಗಯ್ಯ ಅವರನ್ನು ಪರಿಶೀಲನೆಗಾಗಿ ಕರೆದುಕೊಂಡು ಹೋಗಲಾಗಿದೆ. ಪರಿಶೀಲನೆ ಮಾಡಿದ್ದ ಜೋಗಯ್ಯ ಇದು ಸುವರ್ಣ ತ್ರಿಭುಜ ಬೋಟ್ಗೆ ಸಂಬಂಧಿಸಿದ್ದು ಅಲ್ಲ ಎಂದಿದ್ದಾರೆ ಎಂದು ಸತೀಶ್ ಕುಂದರ್ ಮಾಹಿತಿ ನೀಡಿದ್ದಾರೆ.