ಪುತ್ತೂರು,ಜ 28 (MSP): ಗಂಗಾ ಕಲ್ಯಾಣ ಯೋಜನೆಯಿಂದ ಕೆಂಪು ಕಲ್ಲು ಬಳಸಿ ನಿರ್ಮಾಣ ಮಾಡಿದ್ದ ಕುಡಿಯುವ ನೀರಿನ ಟ್ಯಾಂಕ್ ಒಡೆದು ಯುವಕನೋರ್ವ ಸಾವನ್ನಪ್ಪಿದ್ದು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಪಾಪೆಮಜಲಿನಲ್ಲಿ ನಡೆದಿದೆ.
ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಅಂಗಾರ ಅವರ ಪುತ್ರ ರಮೇಶ್ ಯಾನೆ ರಾಮ (30) ಮೃತಪಟ್ಟ ವ್ಯಕ್ತಿ. ಘಟನೆಯಲ್ಲಿ ಪಾಪೆಮಜಲು ನಿವಾಸಿ ಚನಿಯ ಅವರ ಪುತ್ರ ಮಾಧವ ಎಂಬುವವರ ಕಾಲು ಮುರಿದಿದೆ. ಮೃತ ರಮೇಶ್ ಹಾಗೂ ಗಾಯಾಳು ಮಾಧವ ಕೂಲಿ ಕಾರ್ಮಿಕರು. ಸುಮಾರು 6 ವರ್ಷಗಳ ಹಿಂದೆ ಅರಿಯಡ್ಕ ಗ್ರಾಮದ ಪಾಪೆಮಜಲು ಎಂಬಲ್ಲಿ ಗಂಗಾ ಕಲ್ಯಾಣ ಯೋಜನೆ ಅನುದಾನದಲ್ಲಿ ಕೆಂಪು ಕಲ್ಲು ಬಳಸಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿನ ಮಾಡಲಾಗಿತ್ತು. ಆದರೆ ಟ್ಯಾಂಕ್ ನಿರ್ಮಾಣ ಮಾಡಿದ ದಿನದಿಂದ ನೀರು ತುಂಬಿಸಿರದೆ ಹಾಗೇ ಬಿಡಲಾಗಿತ್ತು. ಆದರೆ ಕೆಲವು ತಿಂಗಳ ಹಿಂದೆ ಟ್ಯಾಂಕ್ಗೆ ನೀರು ತುಂಬಿಸಲು ನೋಡಿದಾಗ ಟ್ಯಾಂಕ್ ಬಿರುಕು ಬಿಟ್ಟಿದ್ದು ಕಂಡು ಬಂದಿತ್ತು. ಬಿರುಕು ಸರಿಪಡಿಸುವ ಕೆಲಸ ಮಾಡಿದ ಬಳಿಕ ಶನಿವಾರ ರಾತ್ರಿ ಈ ಟ್ಯಾಂಕ್ಗೆ ನೀರು ತುಂಬಿಸಲಾಗಿತ್ತು.
ಶನಿವಾರ ರಾತ್ರಿ ಟ್ಯಾಂಕಿಗೆ ನೀರು ತುಂಬಿಸುವ ಕೆಲಸ ಮಾಡಿದ ಹಿನ್ನಲೆಯಲ್ಲಿ ತಡರಾತ್ರಿ ವೇಳೆ ಸ್ಥಳೀಯ ನಾಲ್ವರು ಯುವಕರು ಸೇರಿಕೊಂಡು ಟ್ಯಾಂಕ್ನಲ್ಲಿ ನೀರು ತುಂಬಿದೆಯೇ ಎಂದು ಪರಿಶೀಲಿಸಲು ಹೋಗಿದ್ದರು. ಈ ವೇಳೆ ಟ್ಯಾಂಕ್ ಒಡೆದು ಈ ದುರ್ಘಟನೆ ಸಂಭವಿಸಿದೆ.
ಘಟನೆ ವೇಳೆ ಟ್ಯಾಂಕ್ನ ಪಕ್ಕದಲ್ಲಿದ್ದ ರಮೇಶ್ ಯಾನೆ ರಾಮ ಅವರ ಎದೆಗೆ ಕಲ್ಲು ಜರಿದು ಬಿದ್ದಿರುವುದಾಗಿ ತಿಳಿದು ಬಂದಿದೆ. ಮಾಧವ ಅವರ ಕಾಲಿಗೆ ಕಲ್ಲು ಬಿದ್ದ ಪರಿಣಾಮ ಕಾಲು ಮುರಿದಿದ್ದು, ಕೈಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯುತ್ತಿದ್ದ ವೇಳೆ ರಮೇಶ್ ಯಾನೆ ರಾಮ ಅವರು ದಾರಿ ಮಧ್ಯೆ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಸಂಪ್ಯ ಗ್ರಾಮಾಂತರ ಠಾಣಾ ಎಸ್.ಐ. ಸತ್ತಿವೇಲು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮಕುಮಾರಿ, ಪಂಚಾಯಿತಿ ಸದಸ್ಯರುಗಳಾದ ಸಂತೋಷ್ ಮಣಿಯಾಣಿ, ಚಿತ್ರಾ ನಾಯ್ಕ್, ನಿರ್ಮಲಾ, ತಿಲಕ್ ರೈ ಕುತ್ಯಾಡಿ, ಶಶಿಕಲಾ ಚೌಟ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತಿತರರು ಭೇಟಿ ನೀಡಿದ್ದಾರೆ.