ಬೆಂಗಳೂರು,ಜ 28 (MSP): ಕಾಂಗ್ರೆಸ್ ಪಕ್ಷದ ಶಾಸಕರು ಅತಿರೇಕದಿಂದ ವರ್ತಿಸುತ್ತಿದ್ದಾರೆ. ಅಂತಹ ಶಾಸಕರಿಗೆ ಅವರ ನಾಯಕರು ಬುದ್ದಿಹೇಳಿ ಹದ್ದುಬಸ್ತಿನಲ್ಲಿಡಬೇಕು. ಒಂದು ವೇಳೆ ಇದೇ ವರ್ತನೆ ಪುನಾರವರ್ತನೆಯಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಸಿ.ಎಂ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಅವರೇ ನಮ್ಮ ನಾಯಕರು, ಅವರೇ ನಮ್ಮ ಸಿಎಂ ಎಂದು ಕಾಂಗ್ರೆಸ್ ಶಾಸಕರು ನೀಡುತ್ತಿರುವ ಹೇಳಿಕೆಗೆ ಮಾದ್ಯಮದೊಂದಿಗೆ ಪ್ರತಿಕ್ರಿಯಿಸಿ ಸಿಎಂ ಬೆಂಗಳೂರಿನಲ್ಲಿ ಮಾತನಾಡಿದರು.
ಶಾಸಕರ ಮಿತಿ ಮೀರಿದ ವರ್ತನೆ ಬಗ್ಗೆ ಕಾಂಗ್ರೆಸ್ ನಾಯಕರು ಉತ್ತರಿಸಬೇಕು. ಇವರ ಎಲ್ಲೆ ಮೀರಿದ ವರ್ತನೆಯನ್ನು ಮುಂದುವರಿಸಿದರೆ ನಾನು ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಲು ಸಿದ್ದ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.
ನಿನ್ನೆ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವರಾದ ಪುಟ್ಟರಂಗಶೆಟ್ಟಿ, ಎಂ.ಟಿ.ಬಿ. ನಾಗರಾಜು ಹಾಗೂ ಶಾಸಕ ಎಸ್.ಟಿ. ಸೋಮಶೇಖರ್ ಅವರು ಸಿದ್ದರಾಮಯ್ಯ ಮತ್ತೆ ಸಿಎಂ ಅಗಬೇಕು ಎನ್ನುವ ಇಂಗಿತವನ್ನು ವ್ಯಕ್ತಪಡಿಸಿದ್ದರು.