ಮಂಗಳೂರು,ಜ 28 (MSP): ರಾಷ್ಟ್ರೀಯ ಹೆದ್ದಾರಿ ಮತ್ತು ಒಂಭತ್ತು ವರ್ಷ ಕಳೆದರೂ ತೊಕ್ಕೋಟ್ಟು ಮತ್ತು ಪಂಪ್ ವೆಲ್ ಫ್ಲೈಓವರ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಇದನ್ನು ತ್ವರಿತಗೊಳಿಸಿ ಉದ್ಘಾಟನೆ ಗೊಳಿಸಿ ಸಾರ್ವಜನಿಕ ಸೇವೆಗೆ ಒದಗಿಸಬೇಕೆಂದೂ ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ, ಮಂಗಳೂರು ದಕ್ಷಿಣ ಹಾಗೂ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ತಲಪಾಡಿಯಿಂದ ಪಂಪ್ವೆಲ್ವರೆಗೆ ಕಾಲ್ನಡಿಗೆ ಜಾಥಾಕ್ಕೆ ಸಚಿವ ಯು.ಟಿ. ಖಾದರ್ ಸೋಮವಾರ ಚಾಲನೆ ನೀಡಿದರು.
‘ರಾಷ್ಟ್ರೀಯ ಹೆದ್ದಾರಿ ಮತ್ತು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ- ಜನರ ಜೀವ ಉಳಿಸಿ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ಆರಂಭಗೊಂಡಿದ್ದು ಸಂಜೆ ಪಂಪ್ ವೆಲ್ ಗೆ ತಲುಪಲಿದ್ದು ಬಳಿಕ ಸಾರ್ವಜನಿಕ ಸಭೆ ನಡೆಯಲಿದೆ.
ಪಾದಯಾತ್ರೆ ಆರಂಭಕ್ಕೂ ಮುನ್ನ ತಲಪಾಡಿಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಚಿವ ಯು.ಟಿ ಖಾದರ್ ಕಳೆದ 9 ವರ್ಷಗಳಿಂದ ತೊಕ್ಕೊಟ್ಟು ಮತ್ತು ಪಂಪ್ ವೆಲ್ ಮೇಲ್ಸೇತುವೆ ಮಾಡಿಸಲಾಗದ ಸಂಸದರು ಜಿಲ್ಲೆಯ ಗ್ರಾಮೀಣ ಭಾಗದ ಪಿಡಬ್ಲ್ಯುಡಿ ರಸ್ತೆಯನ್ನೊಮ್ಮೆ ಕಣ್ತೆರೆದು ನೋಡಲಿ ಎಂದರು. ಮುಂದುವರಿದು ಮಾತನಾಡಿದ ಅವರು ಕೇಂದ್ರ ಸರಕಾರದ ಉಜ್ವಲ ಯೋಜನೆ ಸಂಪೂರ್ಣ ವಿಫಲವಾಗಿದ್ದು,
ಗ್ಯಾಸ್ ಗೆ 1000 ರೂ. ಏರಿಕೆ ಮಾಡಿರುವುದು ’ಕೇಂದ್ರದ ಸಾಧನೆ’ ಎಂದು ವ್ಯಂಗ್ಯವಾಡಿದರು. ಕೇಂದ್ರ ಸರ್ಕಾರಕ್ಕೆ ತಾಕತ್ ಇದ್ದರೆ ಇದ್ರೆ ಗ್ಯಾಸ್ ಬೆಲೆಯನ್ನು 450 ರೂ.ಗೆ ಇಳಿಕೆ ಮಾಡಲಿ ಎಂದುಸವಾಲು ಹಾಕಿದರು.
ಈ ಸಂದರ್ಭ ಮಾಜಿ ಸಚಿವರಾದ ರಮನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ ಆರ್. ಲೋಬೊ, ಡಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಕಣಚೂರು ಮೋನು, ಕೆ.ಕೆ. ಶಾಹುಲ್ ಹಮೀದ್, ಸಂತೋಷ್ ಶೆಟ್ಟಿ ಅಸೈಗೋಳಿ, ಪ್ರಶಾಂತ್ ಕಾಜವ, ಮಮತಾ ಗಟ್ಟಿ, ಉಮರ್ ಪಜೀರ್, ರಹ್ಮಾನ್ ಕೋಡಿಜಾಲ್, ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಈಶ್ವರ ಉಳ್ಳಾಲ, ಚಂದ್ರಹಾಸ ಕರ್ಕೇರಾ, ಯುಬಿ ಸಲೀಂ, ಎನ್ ಎಸ್ ಕರೀಂ, ಎ.ಸಿ.ವಿನಯರಾಜ್, ಪ್ರಕಾಶ್ ಶೆಟ್ಟಿ, ರಾಜಶೇಖರ್ ಕೋಟ್ಯಾನ್, ಪ್ರವೀಣ್ ಚಂದ್ರ ಆಳ್ವ, ಲತೀಫ್ ಕಂದುಕ, ಪುರುಷೋತ್ತಮ ಚಿತ್ರಾಪುರ ಹಾಗು ಇತರರು ಪಾಲ್ಗೊಂಡಿದ್ದರು