ಉತ್ತರ ಪ್ರದೇಶ,ಜ 28 (MSP): ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪ್ರವೇಶದಿಂದ ಕಾಂಗ್ರೆಸ್ ಗೆ ನೂರು ಆನೆಯ ಬಲ ಬಂದಂತಾಗಿದೆ, ಎಂದು ಒಂದೆಡೆ ಕಾಂಗ್ರೆಸ್ಸಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಇನ್ನೊಂದೆಡೆ ಅದೇ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶದ ಗೋರಖ್ಪುರದಿಂದ ಸ್ಪರ್ಧಿಸಲಿ ಎಂದು ಒತ್ತಡ ಹೇರತೊಡಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಬುಧವಾರ ಎಐಸಿಸಿ(ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ಕಾಂಗ್ರೆಸ್ ಅವರನ್ನು ಸಕ್ರಿಯ ರಾಜಕಾರಣಕ್ಕೆ ಆಹ್ವಾನಿಸಿ ಉತ್ತರ ಪ್ರದೇಶದ ಜವಬ್ದಾರಿ ನೀಡುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ಲೋಕಸಭಾ ಚುನಾವಣೆಗೆ ನಿಲ್ಲಲಿ ಎಂದು ಪಕ್ಷಕ್ಕೆ ಒತ್ತಡ ಹಾಕುತ್ತಿದ್ದಾರೆ.
ಪ್ರಿಯಾಂಕ ತಾಯಿ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿದ್ದ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಪ್ರಿಯಂಕಾ ಗಾಂಧಿ ಸ್ವರ್ಧಿಸುವ ಸಾಧ್ಯತೆ ಬಗ್ಗೆ ವರದಿಯಾಗುತ್ತಿರುವಂತೆಯೇ , ಗೋರಖ್ಪುರದಿಂದ ಕಣಕ್ಕೆ ಇಳಿಯಲು ಒತ್ತಡ ಪಕ್ಷದ ಕಾರ್ಯಕರ್ತರು ಹೇರತೊಡಗಿದ್ದಾರೆ. ಇದಲ್ಲದೇ ಗೋರಖ್ಪುರದಲ್ಲಿ ಹಲವೆಡೆ ಪ್ರಿಯಾಂಕಾ ಗಾಂಧಿ ಅವರೇ ನಮ್ಮ ಸಂಸದರು ಎಂಬ ಘೋಷಣೆಯುಳ್ಳ ಪೋಸ್ಟರ್ ಗಳು ಕಾಣಸಿಗುತ್ತಿವೆ.