ಮೈಸೂರು,ಜ 28 (MSP): ಕ್ಷೇತ್ರದ ಶಾಸಕರು ಕೈಗೆ ಸಿಗುವುದಿಲ್ಲ ಎಂದು ಸಾರ್ವಜನಿಕ ಸಭೆಯಲ್ಲಿ ತಮ್ಮ ಮಗನ ವಿರುದ್ದ ದೂರು ನೀಡಿದ ಮಹಿಳೆಯ ವಿರುದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿ ತಮ್ಮ ರೌದ್ರಾವತಾರ ಪ್ರದರ್ಶಿಸಿದ ಘಟನೆ ಜಿಲ್ಲೆಯ ವರುಣಾ ವಿಧಾನಸಭಾ ವ್ಯಾಪ್ತಿಯ ಗರ್ಗೇಶ್ವರಿ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ನಡೆದಿದೆ.
ಸಭೆಯಲ್ಲಿ ಮುಂಭಾಗದಲ್ಲಿಯೇ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಜಮಲಾರ್ ಎಂಬ ಮಹಿಳೆ, ನಿಮ್ಮ ಮಗ ಎಂಎಲ್ಎ ಆಗಿದ್ದಾರೆ. ಆದ್ರೆ ಕ್ಷೇತ್ರದ ಜನರ ಕೈಗೆ ಸಿಗುತ್ತಿಲ್ಲ ಟೇಬಲ್ ಕುಟ್ಟಿ ಏರು ಧ್ವನಿಯಲ್ಲಿ ಹೇಳುತ್ತಿದ್ದರು.
ಮಹಿಳೆ ಹೀಗೆ ತಮ್ಮ ಮಗ ವಿರುದ್ದ ದೂರುತ್ತಿದ್ದಾಗ ಸಿದ್ದರಾಮಯ್ಯ ಏಕಾಏಕಿ ಗರಂ ಆಗಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಎಲ್ಲರ ಎದುರೇ ಮಹಿಳೆ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು ಸಿಡಿಮಿಡಿಗೊಂಡಿದ್ದಾರೆ. ‘ಕೂತ್ಕೋಳಮ್ಮ ಸಾಕು...ನನ್ನ ಮುಂದೇನೆ ಟೇಬಲ್ ಕುಟ್ಟುತ್ತೀಯಾ..ದೇಶಕ್ಕೆ ಅನ್ಯಾಯ ಮಾಡಿರೋ ತರ ಮಾತಾಡ್ತೀಯಲ್ಲಾ…?’ ಎಂದು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡು ಬಾಯಿ ಮುಚ್ಚಿಸಿ, ಆಕೆಯ ಬಳಿ ಇದ್ದ ಮೈಕ್ ಕಿತ್ತುಕೊಂಡರು.