ಬೆಂಗಳೂರು,ಜ 29 (MSP): ಶಾಸಕನಾಗಿರುವ ನಿಮ್ಮ ಮಗ ನಮ್ಮ ಕೈಗೆ ಸಿಗುತ್ತಿಲ್ಲ ಎಂದು ದೂರು ಹೇಳಿದ ಕಾಂಗ್ರೆಸ್ ಕಾರ್ಯಕರ್ತೆ ವಿರುದ್ದ ಕೆಂಡಾಮಂಡಲರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕೆಯ ಕೈಯಿಂದ ಮೈಕ್ ಕಸಿದು ಏರುದನಿಯಲ್ಲಿ ಮಾತನಾಡಿದ ಪ್ರಕರಣವನ್ನು ಬಿಜೆಪಿ ರಾಜ್ಯ ಘಟಕವು ಟೀವ್ರವಾಗಿ ಟೀಕಿಸಿದ್ದು , ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು "ಕೌರವರ ಸರ್ಕಾರದ ಆಧುನಿಕ ದುಶ್ಯಾಸನ ! " ಎಂದು ಹೋಲಿಸಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಘಟನಾವಳಿಯ ವಿಡಿಯೋ ತುಣುಕೊಂದನ್ನು ಟ್ವೀಟ್ ಮಾಡಿದ ಬಿಜೆಪಿ ರಾಜ್ಯ ಘಟಕ ಸಿದ್ದರಾಮಯ್ಯ ಅವರನ್ನು ದುಶ್ಯಾಸನಿಗೆ ಹೋಲಿಸಿದೆ.
ಬಳಿಕ ಮತ್ತೊಂದು ಟ್ವೀಟ್ ಮಾಡಿದ ರಾಜ್ಯ ಘಟಕ, ಕಬ್ಬು ಬಾಕಿ ಪಾವತಿಸುವಂತೆ ಕೇಳಿದ್ದ ರೈತ ಮಹಿಳೆಗೆ ‘ನಾಲ್ಕು ವರ್ಷಗಳಿಂದ ಎಲ್ಲಿ ಮಲಗಿದ್ದೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಇದಲ್ಲದೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಐಪಿಎಸ್ ಅಧಿಕಾರಿಯನ್ನು ಬ್ಲಡಿ ರಾಸ್ಕಲ್ ಎಂದು ನಿಂದಿಸಿದರು. ಇದೀಗ ಸಿದ್ದರಾಮಯ್ಯ ಅವರು ಮಹಿಳೆಯ ಮೈಕ್ ಕಿತ್ತುಕೊಂಡು ಬೆದರಿಕೆ ಹಾಕಿದ್ದಾರೆ. ರಾಜ್ಯದಲ್ಲಿ ದುಶ್ಯಾಸನ ಮರುಜನ್ಮ ಪಡೆದು ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಪಡೆದಿದ್ದಾನೆ. ಇದು ಜೆಡಿಎಸ್–ಕಾಂಗ್ರೆಸ್ ಪಕ್ಷಗಳು ರಾಜ್ಯದಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿ’ ಎಂದು ಟೀಕಿಸಿದೆ.