ಮಂಗಳೂರು,ಜ 29 (MSP): ಮಂಗಳೂರು ಕ್ಯಾಥೋಲಿಕ್ ಕುಟುಂಬವೊಂದರಲ್ಲಿ ಲೈಸ್ ಮರ್ತಾ ಫರ್ನಾಂಡಿಸ್ ಹಾಗೂ ಜಾನ್ ಜೋಸೆಫ್ ಫರ್ನಾಂಡಿಸ್ ದಂಪತಿಗಳಿಗೆ ಜೂನ್ 3, 1930 ರಲ್ಲಿ ಜನಿಸಿದ ಜಾರ್ಜ್ ಮ್ಯಾಥ್ಯೂ ಫರ್ನಾಂಡಿಸ್ ಭಾರತೀಯ ರಾಜಕೀಯ ಇತಿಹಾಸದಲ್ಲಿ ಮರೆಯಲಾಗದ ಹೆಜ್ಜೆಗುರುತು ಮೂಡಿಸಿದ ಧೀಮಂತ ರಾಜಕಾರಣಿಯಾಗಿದ್ದರು.
ಮೊಮ್ಮಗ ಹಾಗೂ ಮೊದಲ ಪತ್ನಿ ಲೈಲಾ ಅವರೊಂದಿಗೆ ಜಾರ್ಜ್
ಜಾರ್ಜ್ ಹಾಗೂ ಅವರ ಕುಟುಂಬ
ಸೊಸೆ, ಮಗ, ಹಾಗೂ ಮೊಮ್ಮಗನೊಂದಿಗೆ ಜಾರ್ಜ್
ಎರಡನೇ ಪತ್ನಿ ಜಯಾ ಜೇಟ್ಲಿಯೊಂದಿಗೆ ಜಾರ್ಜ್
ಲೈಸ್ ಹಾಗೂ ಜಾನ್ ದಂಪತಿಗಳ ಆರು ಮಕ್ಕಳಲ್ಲಿ ಹಿರಿಯ ಮಗನಾಗಿ ಜನಿಸಿದ ಜಾರ್ಜ್ ಫರ್ನಾಂಡಿಸ್ ತಮ್ಮ ಶಿಕ್ಷಣವನ್ನು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜ್ ನಲ್ಲಿ ಮುಗಿಸಿದರು. ಇವರಿಗೆ ಪ್ರಭಾವ ಬೀರಿದ ವ್ಯಕ್ತಿಯಲ್ಲಿ ಅಮ್ಮೆಂಬಳದ ಬಾಳಪ್ಪನವರದ್ದು ಒಂದು ಪಾಲಿದೆ. ಅವರು ಅಂದು ಜಾರ್ಜ್ ಅವರಿಗೆ ಬದುಕಿನ ಪಾಠ ಹೇಳಿಕೊಡದಿದ್ದರೆ ಇಂದು ಜಾರ್ಜ್ ಸಾಮಾನ್ಯ ವ್ಯಕ್ತಿಯಾಗಿ ಇರುತ್ತಿದ್ದರೋ ಏನೋ ತಿಳಿದಿಲ್ಲ. ಇವರ ಹೆತ್ತವರು ಅಂದು ಪಾದ್ರಿಯಾಗಲು ಧಾರ್ಮಿಕ ಶಿಕ್ಷಣಕ್ಕೆ ಕಳುಹಿಸಿದರೂ ಜಾರ್ಜ್ ಅವರಿಗೆ ಅದರಲ್ಲಿ ಆಸಕ್ತಿ ಬರಲಿಲ್ಲ. ಅವರ ಹೃದಯ ಮಿಡಿದದ್ದು ಕಾರ್ಮಿಕರಿಗಾಗಿ ಬಡವರಿಗಾಗಿ, ಹೀಗಾಗಿಯೇ ಕಾರ್ಮಿಕ ಪರ ಹೋರಾಟಗಳಲ್ಲಿ ಭಾಗವಹಿಸಿದರು. ಡಾ. ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿ ಸಮಾಜವಾದಿಯಾದರು. ಉದ್ಯೋಗ ಹುಡುಕಿಕೊಂಡು ಮುಂಬೈಗೆ ಬಂದ ಅವರು ಅನೇಕ ಹೋರಾಟಗಳಲ್ಲಿ ಭಾಗವಹಿಸಿದರು. ಹಲವು ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದ ಫರ್ನಾಂಡಿಸ್, ಪತ್ರಕರ್ತರೂ, ಲೇಖಕರೂ ಆಗಿದ್ದರು. 1949 ರಲ್ಲಿ ಫರ್ನಾಂಡಿಸ್, ಪತ್ರಿಕೆಯೊಂದರಲ್ಲಿ ಪ್ರೂಫ್ ರೀಡರ್ ಆಗಿ ಕೆಲಸಕ್ಕೆ ಸೇರುವವರೆಗೂ ರಸ್ತೆಯ ಅವರ ಮನೆಯಾಗಿತ್ತು. ಅವರು ಬೀದಿ ಬದಿಯಲ್ಲೇ ಮಲಗುತ್ತಿದ್ದರು.
ಕೊಂಕಣಿ, ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ, ತುಳು, ತಮಿಳು, ಉರ್ದು ಸೇರಿದಂತೆ 10 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಜಾರ್ಜ್ ಸಂಸತ್ತಿನಲ್ಲಿ ಮಾತನಾಡಲು ನಿಂತರೆ ಇಡೀ ಸಂಸತ್ತೇ ಕಿವಿಯಾಗುತ್ತಿತ್ತು. ಅಂತಹ ಮೇರು ವ್ಯಕ್ತಿತ್ವ ಜಾರ್ಜ್ ಅವರದಾಗಿತ್ತು. 1971 ಜುಲೈ 21 ರಂದು ರೆಡ್ ಕ್ರಾಸ್ ನ ಸಹಾಯಕ ಸಿಬ್ಬಂದಿಯಾಗಿದ್ದ, ಮಾಜಿ ಕೇಂದ್ರ ಸಚಿವ ಹುಮಾಯುನ್ ಕಬಿರ್ ಅವರ ಪುತ್ರಿ ಲೈಲಾ ಕಬಿರ್ ಅವರನ್ನು ವಿವಾಹವಾದರು. ಜಾರ್ಜ್ ಮತ್ತು ಲೈಲಾ ದಂಪತಿಗೆ ಸೀನ್ ಫರ್ನಾಂಡಿಸ್ ಎಂಬ ಪುತ್ರನಿದ್ದು, ಅಮೆರಿಕದಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರ ದಾಂಪತ್ಯ ಜೀವನ 13 ವರ್ಷಕ್ಕೆ ಕೊನೆಗೊಂಡಿತು. 1984 ರಲ್ಲಿ ಲೈಲಾ ಹಾಗೂ ಜಾರ್ಜ್ ಅವರು ವಿಚ್ಛೇದನ ಪಡೆದುಕೊಂಡರು. ಆ ಬಳಿಕ ಫರ್ನಾಂಡಿಸ್,ಜಯಾ ಜೇಟ್ಲಿ ಅವರೊಂದಿಗೆ ಮುಂದಿನ ಬದುಕು ಹಂಚಿಕೊಂಡರು.
ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕಾಲಘಟ್ಟವದು. ಈ ಸಂದರ್ಭದಲ್ಲಿ 1977 ರ ಲೋಕಸಭಾ ಚುನಾವಣೆಗೆ ತಿಹಾರದ ಜೈಲಿನಲ್ಲಿ ಇದ್ದುಕೊಂಡು ಬಿಹಾರದ ಮುಜಾಫರ್ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಯಾವುದೇ ಪ್ರಚಾರವಿಲ್ಲದೇ, ದುಡ್ಡು, ಬಾಟಲಿಗಳ ಆಮಿಷಗಳಿಲ್ಲದೇ ಜೈಲಿನಲ್ಲಿದ್ದುಕೊಂಡೇ ಚುನಾವಣೆ ಸ್ಪರ್ಧಿಸಿ ಮೂರು ಲಕ್ಷ ಮತಗಳ ಅಂತರದಿಂದ ಗೆದ್ದು ಇತಿಹಾಸ ಸೃಷ್ಟಿಸಿದ್ದರು ಜಾರ್ಜ್.