ಚಿತ್ರದುರ್ಗ,ಜ 29 (MSP):ಮಾಜಿ ಮುಖ್ಯಮಂತ್ರಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ರಾವಣಾಸುರ, ಸಂಸ್ಕಾರ ಇಲ್ಲದ ವ್ಯಕ್ತಿ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹೆಣ್ಣುಮಕ್ಕಳ ಮೇಲೆ ಸಿದ್ದರಾಮಯ್ಯ ಅವರಿಗೆ ಗೌರವ ಇಲ್ಲ, ಅವರಲ್ಲಿ ರಾವಣಾಸುರನ ಎಲ್ಲಾ ಗುಣಗಳು ಇದೆ. ಅವರ ನಡವಳಿಕೆಯಲ್ಲಿ ಪ್ರಾಮಾಣಿಕತೆ ಇಲ್ಲ. ಮಹಿಳೆಯರನ್ನು ಅಗೌರವದಿಂದ ಕಾಣುವ ಸಿದ್ದರಾಮಯ್ಯ ಅವರು ಅಷ್ಟು ದೊಡ್ಡ ಮನುಷ್ಯನಲ್ಲ. ಅವರು ಏನೂ ಎಂಬುವುದು ಹತ್ತಿರದಿಂದ ನೋಡಿದವರಿಗೆ ಎಲ್ಲರಿಗೂ ಗೊತ್ತು. ಯಾರಿಗೂ ಇಷ್ಟವಾಗದ ನಡವಳಿಕೆ ಅವರದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಅಳಿವಿನಂಚಿನಲ್ಲಿದ್ದು, ಅದು ತನ್ನ ಕೊನೆಯ ದಿನಗಳನ್ನು ಕಾಣುತ್ತಿದೆ. ಯಾವ ಕ್ಷಣದಲ್ಲಿ ಬೇಕಾದರೂ ಮೈತ್ರಿ ಸರ್ಕಾರ ಪತನವಾಗಬಹುದು. ವರ್ಗಾವಣೆ ದಂಧೆ ಎಚ್ ಡಿಕೆ ಕುಟುಂಬದ ಹಿಡಿತದಲ್ಲಿದ್ದು ಲಂಚಕ್ಕಾಗಿ ಹಾಗೂ ಕಮಿಷನ್ ಹಣಕ್ಕಾಗಿ ಎರಡು ಪಕ್ಷಗಳೂ ಜಗಳವಾಡುತ್ತಿದೆ ಎಂದು ಆರೋಪಿಸಿದರು.